ರಾಷ್ಟ್ರೀಯ

ಮೋದಿ ತಮಗಾಗಿ ಅಧಿಕಾರ ಬಯಿಸಿದ್ದರು, ನಾನು ಜನತೆಗಾಗಿ ಬಯಸಿದ್ದೆ: ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ

Pinterest LinkedIn Tumblr

rahul

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು, ಮೋದಿ ತಮಗಾಗಿ ಅಧಿಕಾರ ಬಯಿಸಿದ್ದರು ಎಂದು ಹೇಳಿದ್ದಾರೆ.

ಗುರುವಾರ ತಮ್ಮ ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು, ಕೇಂದ್ರ ಎನ್‌ಡಿಎ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ‘ನರೇಂದ್ರ ಮೋದಿ ಅವರು ವಿಭಿನ್ನವಾಗಿ ಚಿಂತಿಸುವ ಮತ್ತು ಸರ್ವಾಧಿಕಾರ ಹೊಂದಬಯಸುವ ವ್ಯಕ್ತಿಯಾಗಿದ್ದಾರೆ’ ಎಂದು ರಾಹುಲ್ ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷ ಸರ್ವರಿಗೂ ಅಧಿಕಾರ ಕೊಡುವ ಮೂಲಕ ಅವರ ಅಭಿವೃದ್ಧಿ ಬಯಸಿದ್ದು, ಆ ಮೂಲಕ ವಿಶ್ವವೇ ಅವರ ಕೂಗನ್ನು ಅಲಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಮಗಿಂತಲೂ ವಿಭನ್ನವಾಗಿದ್ದು, ಇಡೀ ದೇಶದ ಆಡಳಿತ ತಮ್ಮೊಬ್ಬರ ಕೈಯಲ್ಲಿ ಮಾತ್ರ ಇರಬೇಕು ಎನ್ನುವ ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ದೆಹಲಿಯಲ್ಲಿರುವ ಅಧಿಕಾರಿಗಳ ಮುಖಾಂತರವೇ ಇಡೀ ದೇಶದ ವಿದ್ಯಮಾನಗಳು ನಡೆಯಬೇಕು ಎಂದು ಬಯಸುತ್ತಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.

‘ಕಾಂಗ್ರೆಸ್ ಪಕ್ಷ ಸರ್ಕಾರವನ್ನು ಸಾರ್ವಜನಿಕರು ಕೂಡ ಪ್ರಶ್ನಿಸಬಲ್ಲ ನರೇಗಾ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಯೋಜನೆಗಳಂತಹ ಹಲವು ಜನ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಸ್ತುತ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ಇಂತಹ ಯಾವ ಯೋಜನೆಗಳನ್ನು ಜಾರಿಗೊಳಿಸಿದೆ ಹೇಳಿ’ ಎಂದು ರಾಹುಲ್ ಪ್ರಶ್ನಿಸಿದರು.

ನಿನ್ನೆ ಕೂಡ ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ಟೀಕೆ ಮಾಡಿದ್ದ ರಾಹುಲ್ ಗಾಂಧಿ ಅವರು, ಜಗದೀಶ್ ಪುರಕ್ಕೆ ತೆರಳಿದ್ದಾಗ ನರೇಂದ್ರ ಮೋದಿ ಅವರ ಆದರ್ಶ ಗ್ರಾಮ ಯೋಜನೆಯನ್ನು ಅನಗತ್ಯ ಯೋಜನೆ ಎಂದು ಟೀಕಿಸಿದ್ದರು. ‘ನನ್ನ ಸ್ವಕ್ಷೇತ್ರ ಅಮೇಥಿಯಲ್ಲಿ ಸುಮಾರು 600 ಗ್ರಾಮಗಳಿದ್ದು, ನನಗೆ ಕೇವಲ ಒಂದು ಗ್ರಾಮವನ್ನು ಮಾತ್ರ ಆರಿಸಿಕೊಳ್ಳುಂತೆ ಹೇಳುತ್ತಾರೆ. ಆದರೆ ನನ್ನ ಯೋಚನಾ ಲಹರಿಯೇ ಬೇರೆಯಾಗಿದ್ದು, ಅಮೇಥಿಯಲ್ಲಿರುವ ಸಮಗ್ರ ಗ್ರಾಮಗಳನ್ನು ಅಭಿವೃದ್ಧಿಗೊಳಿಸಬೇಕು’ ಎಂದು ರಾಹುಲ್ ಹೇಳಿದರು.

ಒಟ್ಟಾರೆ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕೆಲಕಾಲ ನಾಪತ್ತೆಯಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸರಣಿಯಾಗಿ ಟೀಕಾ ಪ್ರಹಾರಗಳನ್ನು ಹರಿಸುತ್ತಿದ್ದಾರೆ.

Write A Comment