ಮಂಗಳೂರು, ಡಿ.6: ಬೆಂಗಳೂರಿನಲ್ಲಿ ರುವ ಕ್ಯಾನ್ಸರ್ ನಿವಾರಣಾ ಆಸ್ಪತ್ರೆ ಕಿದ್ವಾಯಿ ಹಾಗೂ ಹೃದ್ರೋಗ ಸಂಬಂಧಿತ ಜಯದೇವ ಆಸ್ಪತ್ರೆಯ ಉಪ ಘಟಕಗಳನ್ನು ಮಂಗಳೂರಿನ ವಾಮಂಜೂರು ಟಿ.ಬಿ. ಆಸ್ಪತ್ರೆಯಲ್ಲಿ ಆರಂಭಿಸುವಂತೆ ಸರಕಾರಕ್ಕೆ ಆರೋಗ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಇಂದು ವೆನ್ಲಾಕ್ ಆಸ್ಪತ್ರೆ ಯಲ್ಲಿ ಕೈಗೊಂಡ ವಿವಿಧ ನೂತನ ವಿಭಾಗಗಳ ಉದ್ಘಾಟನಾ ಸಮಾರಂಭದ ಬಳಿಕ ಆಸ್ಪತ್ರೆಯ ಆರ್ಎಪಿಸಿಸಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮಾತನಾಡುತ್ತಿದ್ದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯನ್ನು ಸೂಪರ್ ಸ್ಪೆಷಾಲಿಟಿ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅದರ ಪೂರ್ವ ಭಾವಿಯಾಗಿ ವಿವಿಧ ವಿಭಾಗಗಳ ಉದ್ಘಾಟನೆ ನಡೆದಿದೆ. ಇಲ್ಲಿರುವ ಡಯಾಲಿಸಿಸ್ ಕೇಂದ್ರವನ್ನು ಪುನರ್ ನಿರ್ಮಾಣಗೊಳಿಸಿ ಸುಸಜ್ಜಿತಗೊಳಿಸ ಲಾಗುವುದು. ಡಿಜಿಟಲ್ ಎಕ್ಸ್ರೇ ವ್ಯವಸ್ಥೆಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದರು.
ಉದ್ಘಾಟನೆಗೊಂಡ ವಿವಿಧ ವಿಭಾಗಗಳು:
ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು 1.12 ಕೋ.ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಜಲತ್ಯಾಜ್ಯ ಸಂಸ್ಕರಣಾ ಘಟಕ, 20 ಲಕ್ಷದ 30 ಸಾವಿರ ರೂ. ವೆಚ್ಚದ ಸುಸಜ್ಜಿತ ಶವಾಗಾರ, 15 ಲಕ್ಷ ರೂ. ವೆಚ್ಚದ ತುರ್ತು ಚಿಕಿತ್ಸಾ ವಿಭಾಗ, 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ಷ-ಕಿರಣ ವಿಭಾಗ, 10 ಲಕ್ಷ ರೂ. ವೆಚ್ಚದ ಡಾಟ್ ಪ್ಲಸ್ ವಿಭಾಗ ಹಾಗೂ ಕ್ಯೂರ್ ಇಂಟರ್ನ್ಯಾಷನಲ್ ಇಂಡಿಯಾ ಟ್ರಸ್ಟ್ ಸಹಭಾಗಿತ್ವದೊಂದಿಗೆ ನಿರ್ಮಿಸಿರುವ ಕ್ಲಬ್ ೂಟ್ ಕೇರ್ ಸೆಂಟರ್ನ ಉದ್ಘಾಟನೆ ನಡೆದಿದೆ. ಡಾಟ್ ಪ್ಲಸ್ ವಿಭಾಗವು ಕ್ಷಯರೋಗಿಗಳಿಗೆ ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ ಒದಗಿಸುವ ಕೇಂದ್ರ ವಾಗಿದೆ. ಆಸ್ಪತ್ರೆಯ ಶವಾಗಾರವನ್ನು ರಾಜ್ಯಕ್ಕೆ ಮಾದರಿಯಾಗಿ ನವೀಕರಣ ಗೊಳಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ವಿವಿಧ ವಿಭಾಗಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವ ಬಿ. ರಮಾನಾಥ ರೈ, ವೆನ್ಲಾಕ್ ಆಸ್ಪತ್ರೆಯಲ್ಲಿ ಸುವ್ಯವಸ್ಥಿತ ವಿಭಾಗಗಳನ್ನು ಆರಂಭಿಸ ಲಾಗಿದ್ದು, ದೂರದೂರಿನಿಂದ ರೋಗಿ ಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಈ ಮೂಲಕ ವೆನ್ಲಾಕ್ ಆಸ್ಪತ್ರೆಯು ಜನರ ವಿಶ್ವಾಸಾರ್ಹ ಆಸ್ಪತ್ರೆ ಯಾಗಿ ರೂಪುಗೊಂಡಿದೆೆ ಎಂದರು. ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದು, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಮನಪಾ ಉಪಮೇಯರ್ ಕವಿತಾವಾಸು, ಜಿಪಂ ಸಿಇಒ ತುಳಸಿ ಮದ್ದಿನೇನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.
ಡಾ.ಈರಪ್ಪ ಸ್ವಾಗತಿಸಿದರು. ಜಿಲ್ಲಾ ಶಸಚಿಕಿತ್ಸಕಿ ಹಾಗೂ ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿದೇವಿ ಎಚ್.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರಕಾರಿ ಆಸ್ಪತ್ರೆಯಲ್ಲಿ ಕಡಿಮೆ ದರದ ಊಟ!
ಸರಕಾರಿ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಊಟ ನೀಡುವ ಯೋಜನೆಯನ್ನೂ ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದ ಸಚಿವ ಖಾದರ್, ವೆನ್ಲಾಕ್ ಆಸ್ಪತ್ರೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ಜೆನರಿಕ್ ಔಷಧಿಗಳು ದೊರೆಯಲಿವೆ. ವೆನ್ಲಾಕ್ನಲ್ಲಿ ಹೈಟೆಕ್ ಮಾದರಿಯ ಲ್ಯಾಬ್ ನಿರ್ಮಾಣ ಮಾಡುವ ಮೂಲಕ ಎಂಆರ್, ಸ್ಕಾನಿಂಗ್ ಅನ್ನು ಏಕ ದರದಲ್ಲಿ ಜನರಿಗೆ ಸುಲಭವಾಗಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಮಂಗಳೂರಿನಲ್ಲಿ ಆಯುಷ್ ಆಸ್ಪತ್ರೆಯ ಘಟಕ ಕೂಡಾ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.