ಮಂಗಳೂರು,ಡಿ.06: ಈ ಹಿಂದೆ ನಾಟಕ ಪ್ರದರ್ಶನಗಳೆಂದರೆ ಬಲುಕಷ್ಟ. ಆ ಕಾಲದಲ್ಲಿ ನಾಟಕ ಎಂದರೆ ಸಮಾಜಕ್ಕೆ ಸಂದೇಶದ ಜತೆಗೆ ಕಣ್ಣೀರು ಸುರಿಸುವಂತಹ ಕಥಾನಕವನ್ನು ಹೊಂದಿತ್ತು. ಕಾಲ ಬದಲಾದಂತೆ ಯುವ ನಾಟಕಕಾರರ ಹೊಸ ಪರಿಕಲ್ಪನೆಯ ನಾಟಕ ಪ್ರದರ್ಶನಗಳ ಮೂಲಕ ತುಳು ರಂಗಭೂಮಿಯಲ್ಲಿ ಬದಲಾವಣೆ ಕಂಡುಕೊಳ್ಳಲಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿಹಬ್ಬದ ಅಂಗವಾಗಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವತುಳುವೆರೆ ಪರ್ಬ 2014 ರ ನೆನಪಿನ ಅಂಗವಾಗಿ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆದ ತುಳುನಾಟಕ ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಿನ ನಾಟಕ ತಂಡಗಳಿಂದ ಉತ್ತಮ ಹಾಸ್ಯ ಮನರಂಜನೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ನಗು ಭರಿಸುವ ಹಾಸ್ಯ ಸಂಭಾಷಣೆಗಳು ಮನತಟ್ಟುತ್ತವೆ ಎಂದರು.
ಸಮಾರಂಭದಲ್ಲಿ ರಂಗ, ನಿರ್ದೇಶಕ ಆನಂದ ಗಾಣಿಗರ ನೆಂಪು ಕಾರ್ಯಕ್ರಮವು ಜರಗಿತು. ನಾಟಕ ರಚನೆಕಾರ್ತಿ ಕ್ಯಾಥರಿನ್ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾಮಚಂದರ್ ಬೈಕಂಪಾಡಿ, ಗಂಗಾಧರ ಕಿದಿಯೂರ್, ಮಹಾಬಲ ಶೆಟ್ಟಿ ಅಡ್ಯಾರ್, ಎಂ.ಬಿ.ಪುರಾಣಿಕ್, ಸುಧಾಕರ ಅಡ್ಯಾರ್, ಮಾಧವ ನಾಕ್ ಅಡ್ಯಾರ್ ಉಪಸ್ಥಿತರಿದ್ದರು.
ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿದರು. ದಯಾನಂದ ಕಟೀಲು ವಂದಿಸಿದರು. ನಾಟಕ ಪರ್ಬ ಸಮಿತಿಯ ಸಂಚಾಲಕ ವಿ.ಜಿ.ಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪ್ರದೀಪ್ ಆಳ್ವ ಕದ್ರಿ, ವಿಜಯಲಕ್ಷ್ಮೀ ಬಿ.ಶೆಟ್ಟಿ, ಶ್ರೀಲತಾ ಉಳ್ಳಾಲ, ಜಯಲಕ್ಷ್ಮೀ ಹೆಗ್ಡೆ ಅಡ್ಯಾರ್ ಸಹಕರಿಸಿದರು. ಬಳಿಕ ಸುಮನಸಾ ಕೊಡವೂರು ಉಡುಪಿ ಇವರಿಂದ `ಕೋಟಿಚೆನ್ನಯ’ ನಾಟಕ ಪ್ರದರ್ಶನಗೊಂಡಿತು.