ಮಂಗಳೂರು, ಡಿ.8 ಕೇಂದ್ರ ಸರಕಾರ ಅನುಮತಿ ನೀಡಿದರೆ ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ಮಾಸಿಕ ನೂರು ರೂಪಾಯಿ ಶುಲ್ಕ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಮೂಲ ಸೌಕರ್ಯ ಅಭಿವೃದ್ಧಿ, ಮಾಹಿತಿ ಮತ್ತು ಹಜ್ ಇಲಾಖೆ ಸಚಿವ ರೋಶನ್ ಬೇಗ್ ಹೇಳಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಸರ್ಕ್ಯೂಟ್‌ಹೌಸ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು. 500ಕ್ಕೂ ಅಧಿಕ ಚಾನೆಲ್‌ಗಳನ್ನು ಕೇಬಲ್ ಮೂಲಕ ನೀಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿರುವುದಾಗಿ ಕೇಬಲ್ ಆಪರೇಟರ್‌ಗಳು ಹೇಳುತ್ತಿದ್ದಾರೆ. ಆದರೆ ಜನರಿಗೆ ಸುದ್ದಿ, ಕಾರ್ಟೂನ್ ಮತ್ತು ಮನರಂಜನೆಯ ಕೆಲವು ಚಾನೆಲ್‌ಗಳು ಸಾಕಾಗುತ್ತವೆ.
ಅಗತ್ಯ ಚಾನೆಲ್‌ಗಳನ್ನು ಮಾತ್ರ ನೀಡಿ ಕಡಿಮೆ ಶುಲ್ಕ ವಸೂಲಿಗೆ ಸೂಚಿಸಲಾಗುವುದು. ಇದಕ್ಕೆ ಟ್ರಾಯ್ ಅನುಮತಿಯ ಅಗತ್ಯವಿದೆ. ಈ ಹಿಂದೆ ಕೇಂದ್ರ ಸರಕಾರದೊಡನೆ ಮಾತುಕತೆ ನಡೆಸಿದ್ದು, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೇಂದ್ರದ ಮಾಹಿತಿ ಇಲಾಖೆ ಸಚಿವಾಲಯದ ಜೊತೆ ಮಾತುಕತೆ ನಡೆಸುವುದಾಗಿ ಸಚಿವ ರೋಶನ್ ಬೇಗ್ ಹೇಳಿದರು.