ಮಂಗಳೂರು : ನಗರದ ಕಾವೂರು – ಕುಂಜತ್ತಬೈಲ್ ಬಳಿ ಅಪರಿಚಿತ ದುಷ್ಕರ್ಮಿಗಳು ಹಾಡುಹಗಲೇ ಕೋಳಿ ವ್ಯಾಪಾರಿಯೊಬ್ಬರಿಗೆ ಚೂರಿ ಇರಿದು ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಕೋಳಿ ವ್ಯಾಪಾರಿ ಮಹಮ್ಮದ್ ಶರೀಫ್ (45) ಎಂದು ಹೆಸರಿಸಲಾಗಿದ್ದು, ಇವರು ಕುಂಜತ್ ಬೈಲಿನಲ್ಲಿ ಕೋಳಿ ಮಾಂಸದ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಶರೀಫ್ ಅವರು ಅಂಗಡಿಯಲ್ಲಿದ್ದ ಸಂದರ್ಭ ಬೈಕಿನಲ್ಲಿ ಬಂದ ಅಪರಿಚಿತ ಯುವಕರು ಏಕಾಏಕಿ ಶರೀಫ್ ಮೇಲೆ ಹರಿತವಾದ ಚೂರಿಯಿಂದ ಇರಿದಿದ್ದಾರೆ. ಇದೇ ಸಂದರ್ಭ ಶರೀಫ್ ಜೊತೆಗಿದ್ದ ಇನ್ನೊಬ್ಬರು ದುಷ್ಕರ್ಮಿಗಳನ್ನು ತಡೆಯಲು ಹೋದಾಗ ಅವರನ್ನು ದೂಡಿಹಾಕಿದ ಅಪರಿಚಿತರು ಸ್ಥಳದಿಂದ ಪರಾರಿಯಾದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶರೀಫ್ ಅವರನ್ನು ಕೂಡಲೇ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರೀಫ್ ಅವರಿಗೆ ತಮ್ಮ ಮೇಲೆ ದಾಳಿ ನಡೆಸಿದವರ ಬಗ್ಗೆ ಮಾಹಿತಿ ಇರ ಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಹಾಗೂ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯ ನಾಗರೀಕರಲ್ಲಿ ಆತಂಕ :
ಕಳೆದ ಶುಕ್ರವಾರ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆ ಹಾಗೂ ಅನಂತರ ನಡೆದ ಘಟನಾವಳಿಗಳಿಂದ ಮಂಗಳೂರು ನಗರದ ಹೊರಭಾಗ ಕೆಲವು ದಿನಗಳಿಂದ ಪ್ರಕ್ಷುಬ್ಧಗೊಂಡಿದೆ. ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಂದು ವಿ.ಎಚ್.ಪಿ ಹಾಗೂ ಬಜರಂಗದಳ ನೇತ್ರತ್ವದಲ್ಲಿ ಹಿಂದೂ ಪರ ಸಂಘಟನೆಗಳು ಗುರುಪುರ ಫಿರ್ಕಾ ವ್ಯಾಪ್ತಿಯಲ್ಲಿ ಬಂದ್ಗೆ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗುರುಪುರ, ಉಳಾಯಿಬೆಟ್ಟು ಮತ್ತು ಸುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಿತ್ತು
ಗುರುಪುರ, ಉಳಾಯಿಬೆಟ್ಟು ಹಾಗೂ ಸುತ್ತಮುತ್ತ ನಡೆಯುತ್ತಿದ್ದ ಗಲಭೆ, ಘರ್ಷಣೆಯ ಮುಂದುವರಿದ ಭಾಗವೆಂಬಂತೆ ಆದಿತ್ಯವಾರ ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಿತ್ಯವಾರ ರಾತ್ರಿ ಬಂದರು ಠಾಣಾ ವ್ಯಾಪ್ತಿಯಲ್ಲಿ ಓರ್ವ ಯುವಕನ ಮೇಲೆ ಹಲ್ಲೆ ನಡೆದಿದೆ. ಈ ಎಲ್ಲಾ ಘಟನೆಗಳು ಮಾಸುವ ಮುನ್ನವೇ ಇದೀಗ ಮತ್ತೆ ನಗರದಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಾಡಹಗಲೇ ದಾಳಿ ನಡೆದಿರುವುದು ದ.ಕ. ಜಿಲ್ಲೆಯ ನಾಗರೀಕರನ್ನು ಆತಂಕಕ್ಕೀಡು ಮಾಡಿದೆ.