ಚೆನ್ನೈ: ಜ್ಯೋತಿಷಿ ಮಾತು ಕೇಳಿ ತಾಳಿ ಕಟ್ಟಿದ ಗಂಡನನ್ನೇ ಪತ್ನಿ ದಾರುಣವಾಗಿ ಕೊಲೆ ಮಾಡಿದ್ದು, ತಮ್ಮ ನಲವತ್ತು ವರ್ಷಗಳ ಸುಖ ಸಂಸಾರಕ್ಕೆ ಎಳ್ಳು ನೀರು ಬಿಟ್ಟಿದ್ದಾಳೆ.
ನಿಮ್ಮ ಗಂಡ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದು, ಈ ಮಾತನ್ನು ಕೇಳಿದ 61 ವರ್ಷದ ಗೃಹಿಣಿ 70 ವರ್ಷದ ಗಂಡನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವಳ್ಳುರ್ ಜಿಲ್ಲೆಯ ಪೆರಿಯಪಾಳ್ಯಂನ ಕನ್ನಿಗೈಪೈರ್ ಗ್ರಾಮದಲ್ಲಿ ನಡೆದಿದೆ.
ಕಳೆದ ರಾತ್ರಿ 1. 15ರ ಸುಮಾರಿನಲ್ಲಿ ವಿಜಯಲಕ್ಷ್ಮೀ ಎಂಬುವರು ಪತಿ ಕತ್ತಿರ್ವೇಲನ್ ಮಲಗಿದ್ದ ಸಮಯದಲ್ಲಿ ಅಡುಗೆ ಚಾಕುವಿನಿಂದ ಹಿರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಪತಿಗಳಿಗೆ ಓರ್ವ ಮಗನಿದ್ದು ಅವನಿಗೆ ಮದುವೆ ಮಾಡಲಾಗಿತ್ತು. ಆದರೆ ಬುದ್ಧಿ ಮಾಂಧ್ಯ ಗಂಡನಿಂದ ಕೆಲ ವರ್ಷಗಳ ಹಿಂದೆ ಸೊಸೆ ಬೇರೆಯಾಗಿದ್ದಳು. ಇದೇ ಸೊಸೆಯೊಂದಿಗೆ ತಮ್ಮ ಗಂಡ ಅನೈತಿಕ ಸಂಬಂಧ ಇರಿಸಿಕೊಂಡಿರುವ ಬಗ್ಗೆ ವಿಜಯಲಕ್ಷ್ಮೀಗೆ ಸಂಶಯ ವ್ಯಕ್ತವಾಗಿದೆ.
ಈ ಸಂಶಯವನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಜ್ಯೋತಿಷಿಯೋರ್ವರ ಬಳಿ ಹೋಗಿದ್ದಾರೆ. ಜ್ಯೋತಿಷಿ ನಿಮ್ಮ ಗಂಡ ಸೊಸೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾನೆ. ಇದೇ ವಿಷಯವಾಗಿ ಸತಿಪತಿಗಳ ನಡುವೆ ಜಗಳವಾಗಿದೆ. ಕತ್ತಿರ್ವೇಲನ್ ವಿಜಯಲಕ್ಷ್ಮಿ ಅವರನ್ನು ಹೊಡೆದಿದ್ದಾರೆ. ಬಳಿಕ ಗಂಡ ಮಲಗುವುದನ್ನು ಕಾಯುತ್ತಿದ್ದ ವಿಜಯಲಕ್ಷ್ಮಿ ಚಾಕುವಿನಿಂದ ಇರಿದು ಕೊಲೆ ಮಾಡಿರವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ವಿಜಯಲಕ್ಷ್ಮಿಯನ್ನು ಬಂಧಿಸಿರುವ ಪೇರಿಯಪಾಳ್ಯಂ ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.