ಕುಂದಾಪುರ: ಗಂಗೊಳ್ಳಿ ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರಿಯಾಗಿ ನಿಭಾಯಿಸಿದ್ದರೆ, ಘಟನೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಮಂಗಳೂರಿನಲ್ಲಿ ಇದೆ ರೀತಿಯ ಘಟನೆಗಳು ನಡೆದಾಗ, ಅಲ್ಲಿ ಸೆಕ್ಷನ್ 144 ಹಾಕಲು ಸಾಧ್ಯವಾಗುತ್ತದೆ, ಆದರೆ ಗಂಗೊಳ್ಳಿಯಲ್ಲಿ ಇದು ಯಾಕೆ ಆಗಲಿಲ್ಲ ಎನ್ನವುದು ಯಕ್ಷ ಪ್ರಶ್ನೆಯಾಗಿದೆ. ಇದೆಲ್ಲವನ್ನೂ ನೋಡಿದರೆ ಈ ಪ್ರಕರಣಕ್ಕೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು ೩ ಗಂಟೆಗಳ ಕಾಲ ರಾ.ಹೆದ್ದಾರಿ ತಡೆಯೂ ಸೇರಿ, ಇಷ್ಟು ದೊಡ್ಡ ಘಟನೆಗಳು ನಡೆಯುತ್ತಿದ್ದರೂ, ಜಿಲ್ಲಾಧಿಕಾರಿಗಳ ಭೇಟಿ ನೀಡದೆ ಇರುವುದು, ಜಿಲ್ಲಾಡಳಿತ ನಿರಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕುಂದಾಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಶಾಸಕರು ಭಾಗವಹಿಸಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಶಾಂತಿ ಸಭೆಯ ಕನಿಷ್ಠ ಮಾಹಿತಿಯನ್ನು ಅಧಿಕಾರಿಗಳು ನನಗೆ ನೀಡಿರಲಿಲ್ಲ. ಘಟನೆ ನಡೆದು ೧೧ ದಿನಗಳ ಕಾಲ ಕ್ಷೇತ್ರದಲ್ಲಿಯೇ ಇದ್ದು, ಪರಿಸ್ಥಿತಿ ತಿಳಿಗೊಳಿಸಲು ನಾನು ಪ್ರಯತ್ನ ನಡೆಸಿದ್ದರೂ, ಅನಗತ್ಯವಾಗಿ ಗೂಬೆ ಕೂರಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆದಿದೆ ಎಂದು ಅವರು ಹೇಳಿದರು.
ಪೊಳ್ಳು ಬೆದರಿಕೆಗಳಿಗೆ ಜಗ್ಗುವುದಿಲ್ಲ: ಗಂಗೊಳ್ಳಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಕ್ಷೇತ್ರದ ಶಾಸಕನ ನೆಲೆಯಲ್ಲಿ ಭೇಟಿ ನೀಡಿದ್ದೇನೆಯೇ ಹೊರತು, ಇನ್ನಾವುದೇ ದುರದ್ದೇಶದಿಂದ ಅಲ್ಲ ಎಂದು ಹೇಳಿದ ಅವರು, ೪ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಎಂದೂ ಅವರ ವಿಶ್ವಾಸಗಳಿಗೆ ದ್ರೋಹ ಮಾಡುವ ಕೆಲಸವನ್ನು ಮಾಡಿಲ್ಲ. ಯಾವುದೆ ಸಮಾಜದವರಿಗೂ ಅನ್ಯಾಯ ಮಾಡಿಲ್ಲ. ಒಂದು ಜಾತಿಯ ವಿರುದ್ದ ಇನ್ನೊಂದು ಜಾತಿಯನ್ನ ಎತ್ತಿಕಟ್ಟುವ ಹಾಗೂ ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಪ್ರಚೋದಿಸುವ ಕೆಲಸಗಳನ್ನು ನನ್ನ ರಾಜಕೀಯ ಜೀವನದಲ್ಲಿ ಈವರೆಗೂ ಮಾಡಿಲ್ಲ. ಈ ರೀತಿಯ ಕೀಳು ಮಟ್ಟದ ರಾಜಕೀಯದಲ್ಲಿ ನನಗೆ ನಂಬಿಕೆಯೂ ಇಲ್ಲ. ಗಂಗೊಳ್ಳಿಯಲ್ಲಿ ನಡೆದ ಆಕಸ್ಮಿಕ ಘಟನೆಗಳಿಗೆ ರಾಜಕೀಯ ಉದ್ದೇಶಗಳಿಗಾಗಿ ಧರ್ಮದ ಬಣ್ಣ ಬಳೆಯಲಾಗುತ್ತಿದೆ. ತಪ್ಪು ಯಾರಿಂದ ನಡೆದಿದ್ದರೂ, ಅದು ಖಂಡನೀಯ. ಇಲ್ಲಿನ ಘಟನೆಗಳ ಕುರಿತು ಹಾಗೂ ನಾನು ನಡೆದುಕೊಂಡಿರುವ ನನಗೆ ನಂಬಿಕೆ ಇರುವ ಕಾರಣದಿಂದ ಯಾವುದೆ ವೇದಿಕೆಯಲ್ಲಿಯೂ ತಾನು ಚರ್ಚೆಗೆ ಸಿದ್ದನಿದ್ದನಿದ್ದು, ರಾಜಕೀಯ ಲಾಭಕ್ಕೋಸ್ಕರ ನಡೆಸುವ ಪೊಳ್ಳು ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಸಂಭವಿಸಿದೆ ಎನ್ನುವ ಮಾಹಿತಿ ಬಂದಾಗ ಅಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಾನು, ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಹಾಗೂ ರಾಜ್ಯಸಭಾ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರುಗಳು, ಗಂಗೊಳ್ಳಿಯ ಒಟ್ಟಾರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರೇ ಅಪರಾಧಿಗಳಿದ್ದರೂ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವು. ತಾನು ಈಗಲೂ ಅದೇ ಹೇಳಿಕೆಗೆ ಬದ್ದನಾಗಿದ್ದೇನೆ, ಅಪರಾಧಿಗಳು ಯಾವುದೆ ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೇರಿದವರಿದ್ದರೂ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಬೇಕು ಎಂದು ಹೇಳಿದರು.
ಬಂದರು ಅಭಿವೃದ್ದಿ, ರಸ್ತೆಗಳ ಅಭಿವೃದ್ದಿ, ಸೀಮೆಎಣ್ಣೆ ಸಮಸ್ಯೆ ಸೇರಿದಂತೆ ಕ್ಷೇತ್ರದ ಶಾಸಕನಾಗಿ ಇಲ್ಲಿನ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕ್ಷೇತ್ರದ ಜನರನ್ನು ಯಾವತ್ತು ಜಾತಿ ನೆಲೆಯಲ್ಲಿ ವಿಭಜನೆ ಮಾಡುವ ಮನಸ್ಥಿತಿ ತನಗೆ ಇಲ್ಲದೆ ಇರುವುದರಿಂದ ಸಮಾದ ಎಲ್ಲ ಜಾತಿ ಹಾಗೂ ಧರ್ಮದ ಜನರನ್ನು ನಾನು ಪ್ರೀತಿಸುತ್ತೇನೆ. ಮುಂದಿನ ದಿನಗಳಲ್ಲಿ ಗಂಗೊಳ್ಳಿಯ ಶಾಂತಿ ಸೌಹಾರ್ಧತೆ ಇರಬೇಕು ಹಾಗೂ ಕಾನೂನು ಸಮಸ್ಯೆಗಳಿಗೆ ಶೀಘ್ರ ಸ್ಪಂದನವಾಗಬೇಕು ಎನ್ನುವ ಉದ್ದೇಶಕ್ಕಾಗಿ ರಾ.ಹೆ ೬೬ರ ಸಮೀಪದಲ್ಲಿ ಇರುವ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ಆದಷ್ಟು ಶೀಘ್ರದಲ್ಲಿ ಗಂಗೊಳ್ಳಿಯಲ್ಲಿಯೇ ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು ನಾನೇನು ತಪ್ಪು ಮಾಡದೆ ಇರುವಾಗ ಕ್ಷೇತ್ರದ ಯಾವುದೆ ಭಾಗಕ್ಕೆ ಹೋಗಲು ತನಗೆ ಅಂಜಿಕೆ ಇಲ್ಲ ಎಂದು ನುಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜೀ ಉಪಾಧ್ಯಕ್ಷ ರಾಜು ದೇವಾಡಿಗ ಉಪಸ್ಥಿತರಿದ್ದರು.