ಶಿವಮೊಗ್ಗ: ‘ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವುದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ. ಅವರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಸಿಐಡಿ ನೀಡಿರುವ ವರದಿ ಸರಿಯಾಗಿದೆ. ವೈದ್ಯಕೀಯ ವರದಿ, ಆಕೆ ಬರೆದ ಪತ್ರ, ಆಕೆಯ ಶಾಲಾ ಸಹಪಾಠಿಗಳ ಹೇಳಿಕೆ ಸೇರಿದಂತೆ ಸಮಗ್ರ ತನಿಖೆಯ ನಂತರ ವರದಿ ನೀಡಲಾಗಿದೆ. ಅಧಿಕಾರಿಗಳು ಯಾರ ಒತ್ತಡಕ್ಕೊ ಮಣಿದು ಪ್ರಯೋಗಾಲಯದ ವರದಿ, ತನಿಖಾ ವರದಿ ನೀಡಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿದರೆ ಮುಂದೆ ಏನಾಗುತ್ತದೆ ಎನ್ನುವುದಕ್ಕೆ ‘ತೆಲಗಿ ಪ್ರಕರಣ’ ನಮ್ಮ ಕಣ್ಣ ಮುಂದಿದೆ. ಅಧಿಕಾರಿಗಳು ಒತ್ತಡಕ್ಕೆ ಮಣಿದು ತಮ್ಮ ಜೀವನ ಹಾಳು ಮಾಡಿಕೊಳ್ಳುವುದಿಲ್ಲ ಎಂದು ಸಚಿವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಬಿಜೆಪಿ ರಾಜಕೀಯ ಲಾಭಕ್ಕಾಗಿ ಕೋಮುಗಳ ಮಧ್ಯೆ ದ್ವೇಷ ಮೂಡಿಸುವ ಕೆಲಸ ಮಾಡುತ್ತಿದೆ. ಎರಡು ಬಾರಿ ಸೋತಿರುವ ಆರಗ ಜ್ಞಾನೇಂದ್ರ ಅವರಿಗೆ ತುರ್ತಾಗಿ ಅಧಿಕಾರ ಬೇಕಿದೆ. ಅದಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕುಟುಕಿದರು.
ನಂದಿತಾ ಪೋಷಕರು ‘ಸಿಐಡಿ ವರದಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುತ್ತಿದ್ದಾರಲ್ಲ’ ಎನ್ನುವ ಪ್ರಶ್ನೆಗೆ, ಅದು ಅವರ ಹಕ್ಕು ಎಂದರು.
ಅಂಗಡಿ ಬೆಂಕಿಗೆ ಆಹುತಿಯಾದ ನಂತರ ನಂದಿತಾ ಪೋಷಕರ ಮನೆಗೆ ಭೇಟಿ ನೀಡಿ ಮಾತನಾಡಿದ್ದೇನೆ. ಮತ್ತೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ದೊರಕಿಸುವ ಭರವಸೆ ನೀಡಿದ್ದೇನೆ. ಆಕೆ ಅಸ್ವಸ್ಥಳಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಈ ಗೊಂದಲ ಇರುತ್ತಿರಲಿಲ್ಲ. ಅದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
‘ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಸಂಸತ್ ಸದಸ್ಯರಾದರೂ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಇಂಥವರು ಇತರರಿಗೆ ಹೇಗೆ ಮಾದರಿಯಾಗುತ್ತಾರೆ?’ ಎಂದು ಟೀಕಿಸಿದರು.