ಇಂದೋರ್: ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಕೋಟಿಗಟ್ಟಲೇ ಸಂಬಳದ ಕೆಲಸ ಗಿಟ್ಟಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಾಲಿಗೆ ಈಗ ಇಂದೋರ್ ಐಐಟಿ ವಿದ್ಯಾರ್ಥಿ ಗೌರವ್ ಅಗರ್ವಾಲ್ ಸೇರ್ಪಡೆಯಾಗಿದ್ದು ಗೂಗಲ್ ಸಂಸ್ಥೆ ಈತನಿಗೆ ನೀಡಲೊಪ್ಪಿರುವ ಸಂಬಳ ವಾರ್ಷಿಕ 1.70 ಕೋಟಿ ರೂಪಾಯಿಗಳು.
ಈ ಭಾರಿ ಮೊತ್ತದ ಸಂಬಳ ಪಡೆಯುವ ನೌಕರಿ ಗಿಟ್ಟಿಸಿಕೊಂಡಿರುವ ಇಂದೋರ್ ಐಐಟಿಯ ಮೊದಲ ವಿದ್ಯಾರ್ಥಿ ಎಂಬ ಗೌರವಕ್ಕೂ ಗೌರವ್ ಅಗರ್ವಾಲ್ ಪಾತ್ರರಾಗಿದ್ದು, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಶಿವಾನಿ ಗುಪ್ತಾ ಈ ಹಿಂದೆ ವಾರ್ಷಿಕ 64 ಲಕ್ಷ ರೂ. ಪ್ಯಾಕೇಜಿಗೆ ಆಯ್ಕೆಯಾಗಿದ್ದೇ ಇದುವರೆಗಿನ ಅತಿ ದೊಡ್ಡ ಮೊತ್ತವಾಗಿತ್ತು.
ತಮಗೆ ಗೂಗಲ್ ಸಂಸ್ಥೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಮಾಡಿ 1.70 ಕೋಟಿ ರೂ. ಸಂಬಳ ನೀಡುತ್ತಿರುವುದಕ್ಕೆ ಎಕ್ಸೈಟ್ ಆಗಿರುವ ಗೌರವ್ ಅಗರ್ವಾಲ್, ತಮ್ಮ ಕುಟುಂಬದಲ್ಲಿ ಯಾರೊಬ್ಬರು ಇಂಜಿನಿಯರ್ ಆಗಿರಲಿಲ್ಲ. ಕೆಲ ಗೆಳೆಯರ ಸಲಹೆಯಂತೆ ತಾವು ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿಕೊಂಡಿದ್ದು ಈಗ ಅದು ಸಾರ್ಥಕವಾದಂತಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅದರಲ್ಲೂ ಐಟಿ ಜಗತ್ತಿನ ಸ್ವರ್ಗವೆಂದೇ ಕರೆಯಲ್ಪಡುವ ಕ್ಯಾಲಿಫೋರ್ನಿಯಾದ ಮಾಹಿತಿ ತಂತ್ರಜ್ಞಾನದ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಗೌರವ್ ಅಗರ್ವಾಲ್ ಕೆಲಸ ಮಾಡಲಿದ್ದು, ಇದು ತಮ್ಮ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ. ಐಐಟಿ ವಿದ್ಯಾರ್ಥಿಗಳನ್ನು ಭಾರೀ ಮೊತ್ತದ ಪ್ಯಾಕೇಜ್ ಮೂಲಕ ಆಯ್ಕೆ ಮಾಡಿಕೊಳ್ಳಲು ದೊಡ್ಡ ದೊಡ್ಡ ಕಂಪನಿಗಳು ಮುಗಿ ಬಿದ್ದಿದ್ದು ಅದರಲ್ಲೂ ಗೂಗಲ್, ಫೇಸ್ ಬುಕ್, ಅಮೆಜಾನ್, ಫ್ಲಿಫ್ ಕಾರ್ಟ್, ಸ್ನ್ಯಾಪ್ ಡೀಲ್, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿವೆ.