ಕನ್ನಡ ವಾರ್ತೆಗಳು

ರೆಡ್ಡಿಗೆ ಜಾಮೀನು ನೀಡಲು ಸಿಬಿಐಯಿಂದ ಏಳು ಷರತ್ತು ವಿಧಿಸುವಂತೆ ಕೋರ್ಟ್‌ಗೆ ಮನವಿ.

Pinterest LinkedIn Tumblr

janardhan-reddy

ಬೆಂಗಳೂರು, ಡಿ.15 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೋಮವಾರ ಜಾಮೀನು ದೊರೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ. ರೆಡ್ಡಿಗೆ ಜಾಮೀನು ನೀಡಲು ಸಿಬಿಐ ಏಳು ಷರತ್ತುಗಳನ್ನು ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದೆ. ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಅರ್ಜಿಯ ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಜನಾರ್ದನ ರೆಡ್ಡಿ ಬಿಡುಗಡೆಗೆ ಏಳು ಷರತ್ತುಗಳನ್ನು ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಷರತ್ತುಗಳನ್ನು ಒಪ್ಪದ ಕೋರ್ಟ್‌ ಈ ಬಗ್ಗೆ ಅಫಿಡೆವಿಟ್‌ ಸಲ್ಲಿಸಲು ಸಿಬಿಐ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.
ಸಿಬಿಐ ಷರತ್ತುಗಳು:
* ಜನಾರ್ದನ ರೆಡ್ಡಿ ಬಿಡುಗಡೆ ನಂತರ ಬಳ್ಳಾರಿಗೆ ತರಳುವಂತಿಲ್ಲ
* ಪಾಸ್‌ಪೋರ್ಟ್‌ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು
* ವಿಚಾರಣೆ ವೇಳೆ ಕೋರ್ಟ್‌ಗೆ ತಪ್ಪದೆ ಹಾಜರಾಗಬೇಕು
* ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು
* ಜಾಮೀನು ನೀಡಲು ಇಬ್ಬರ ಶ್ಯೂರಿಟಿ
* ಭಾರೀ ಮೊತ್ತದ ಹಣ ಠೇವಣಿ ಇಡಬೇಕು
* ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪನಿ ಅವಿಭಜಿತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನ ಓಬಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಿ ಸಾಕಷ್ಟು ಅಕ್ರಮ ನಡೆಸಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ, ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೆ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Write A Comment