ಕನ್ನಡ ವಾರ್ತೆಗಳು

ಮಣಿಪಾಲ-ಮಂಚಿಕೆರೆಯಲ್ಲಿ ಬಾಯ್ದೆರೆದ ಭೂಮಿ; ಲಘು ಭೂ ಕಂಪನ ಕಂಡು ಸ್ಥಳೀಯರಲ್ಲಿ ಭೀತಿ

Pinterest LinkedIn Tumblr

ಉಡುಪಿ: ಮಣಿಪಾಲ-ಅಲೆವೂರು ರಸ್ತೆಯಲ್ಲಿ ಸಿಗುವ ಮಂಚಿಕೆರೆ ನಾಗಬನದ ಬಳಿ ಶುಕ್ರವಾರ ಮತ್ತೆ ಲಘು ಭೂ-ಕಂಪನವಾಗಿದ್ದು, ಭೂಮಿ ಬಾಯ್ದೆರೆದುಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Manipal_Manchikere_Bookampa Manipal_Manchikere_Bookampa (1) Manipal_Manchikere_Bookampa (2) Manipal_Manchikere_Bookampa (3)

ಮಂಚಿಕೆರೆಯ ನಾಗಬನದ ಸಮೀಪದಲ್ಲಿರುವ ಶಂಭು ಕುಂದರ್‌ ಅವರ ಜಾಗದ ಪರಿಸರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರ ಜಾಗದಲ್ಲಿದ್ದ ನೀರಿಲ್ಲದ ಬಾವಿಯಲ್ಲಿ ಮೇಲಿನಿಂದ ಕೆಳಗಿನವರೆಗೆ ವರ್ತುಲಾಕಾರದಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಅಕ್ಕಪಕ್ಕಕ್ಕೂ ಬಿರುಕು ವ್ಯಾಪಿಸಿದೆ. ಭೂಮಿ ಕಂಪಿಸಿರುವುದು, ಬಿರುಕು ಬಿಟ್ಟಿರುವುದು ಮೊದಲಿಗೆ ಗೊತ್ತಾಗಿದ್ದು ಅಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿರುವ ಜಗದೀಶ್‌ ಅವರಿಗೆ. ಕೆಳಪರ್ಕಳದಲ್ಲಿ ಕಳೆದ ಎಪ್ರಿಲ್‌ನಲ್ಲಿ ನೀರುಕ್ಕಿ ಬಂದಿತ್ತು. ಈಗಲೂ ಆ ಭಾಗದಲ್ಲಿ ನೀರಿನ ಮಟ್ಟ ಕಡಿಮೆಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಕಳೆದ ಎಪ್ರಿಲ್‌ನಲ್ಲಿ ಕೆಳಪರ್ಕಳದಲ್ಲಾದ ನೀರುಕ್ಕುವಿಕೆ ಹಾಗೂ ಅನಂತರ 3ನೇ ಬಾರಿ ಮಂಚಿಕೆರೆಯಲ್ಲಾಗುತ್ತಿರುವ ಈ ಭೂಕಂಪನಕ್ಕೆ ನೇರ ಸಂಪರ್ಕವಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ. ಕೆಳಪರ್ಕಳ ತಳಮಟ್ಟದಲ್ಲಿದೆ. ಮಂಚಿಕೆರೆ ಮೇಲ್ಮಟ್ಟದಲ್ಲಿದೆ. ಹಾಗಾಗಿ ಕೆಳಮಟ್ಟದಲ್ಲಿ ನೀರುಕ್ಕಿ ಹೋದಂತೆ ಭೂಗರ್ಭದೊಳಗೆ ಜಾಗ ಖಾಲಿಯಾಗುತ್ತದೆ. ಆ ಜಾಗ ಭರ್ತಿಯಾಗಬೇಕಾದಾಗ ಸ್ಥಾನ ಪಲ್ಲಟವಾಗುತ್ತದೆ. ಆಗ ಏರುಮಟ್ಟದಲ್ಲಿ ಬಿರುಕು ಮೂಡುತ್ತದೆ. ವೀಕ್‌ ಝೋನ್‌ ಆದ ಕಾರಣ ಈ ಲಘು ಭೂ ಕಂಪನಗಳು ಅರಿವಿಗೆ ಬರುತ್ತಿರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಿರಂಜನ್‌ ಅವರು ಮಾತನಾಡಿ, ಈಸ್ಟ್‌-ವೆಸ್ಟ್‌ಗೆ 15 ಮೀ. ಮತ್ತು ನಾರ್ತ್‌ಈಸ್ಟ್‌-ಸೌತ್‌ವೆಸ್ಟ್‌ಗೆ 24 ಮೀ. ಉದ್ದಕ್ಕೆ ಭೂಮಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಬಾವಿಯೊಳಗೂ ಬಹಳ ಬಿರುಕು ಇದೆ. ಪರಿಶೀಲನೆ ನಡೆಸಿ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಹೆಚ್ಚಿನ ಅಧ್ಯಯನಕ್ಕೆ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಕರ್ನಾಟಕದ ಗೌರಿಬಿದನೂರಿನಲ್ಲಿರುವಂತಹ ರಿಕ್ಟರ್‌ ಮಾಪಕ ಕೇಂದ್ರವನ್ನು ಇಲ್ಲಿಯೂ ಅಳವಡಿಸಬೇಕು ಎನ್ನುವುದನ್ನು ವರದಿಯಲ್ಲಿ ಉಲ್ಲೇಖೀಸಲಾಗುವುದು ಎಂದವರು ಹೇಳಿದರು.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಟಿ.ಜಿ. ಗುರುಪ್ರಸಾದ್‌, 80 ಬಡಗಬೆಟ್ಟು ಪಂಚಾಯತ್‌ನ ಜನಪ್ರತಿನಿಧಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment