ಹರಪನಹಳ್ಳಿ: ಇಲ್ಲಿನ ಪ್ರಸಿದ್ಧ ದಂಡಿನ ದುರುಗಮ್ಮದೇವಿ ಜಾತ್ರೆಯಲ್ಲಿ ಭಾನುವಾರ ಭಕ್ತರು ಕಿಲೋಮೀಟರ್ ಉದ್ದ ಬೋರಲಾಗಿ ಮಲಗಿ ಹರಕೆ ತೀರಿಸಿದರು. ಭಕ್ತರ ಬೆನ್ನ ಮೇಲೆ ದೇವಿ ಹೊತ್ತ ದಲಿತ ಅರ್ಚಕ ನಡೆದರು.
ಮಧ್ಯಕರ್ನಾಟಕದ ಈ ಜಾತ್ರೆ ಗ್ರಾಮೀಣ ಸೊಗಡಿನ ಹಾಗೂ ಭಾವೈಕ್ಯ ಬೆಸೆಯುವ ಸಾಂಸ್ಕೃತಿಕ ಹಬ್ಬವೂ ಹೌದು. ಇಲ್ಲಿನ ಹೊಳೆ ದಡದಿಂದ ದೇವಸ್ಥಾನದ ಹೆಬ್ಬಾಗಿಲಿನವರೆಗೂ ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಸುಮಾರು 2ಕಿ.ಮೀ. ದೂರ, ಪಾದಕ್ಕೆ ಮಣ್ಣು ತಾಗದಷ್ಟು ಬೋರಲು ಮಲಗಿ ಹರಕೆ ತೀರಿಸುವುದು ಇಲ್ಲಿನ ಸಂಪ್ರದಾಯ. ಮಲಗಿರುವ ಭಕ್ತರ ಬೆನ್ನ ಮೇಲೆ ದೇವರ ಕೆೇಲನ್ನು ಹೊತ್ತು, ಅರ್ಚಕ ಹೆಜ್ಜೆ ಹಾಕುವುದು ಬಹಳ ವರ್ಷಗಳಿಂದ ನಡೆದುಕೊಂಡ ಬಂದ ಪದ್ಧತಿ.
ಸಾವಿರಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಸಂಭವಿಸಿದ ಭೀಕರ ಸಾವು– ನೋವುಗಳ ಸಂಕಷ್ಟ ನಿವಾರಿಸಲು ಗ್ರಾಮದಲ್ಲಿರುವ ದುರುಗಮ್ಮದೇವಿಗೆ ದಲಿತ ಜನಾಂಗದವರು ಪೂಜೆ ನೆರವೇರಿಸುತ್ತಾ ಬಂದಿದ್ದಾರೆ. ದೇವಿಯ ಮೂರ್ತಿ ಹೊತ್ತ ಅರ್ಚಕ ಹೀಗೆ ಭಕ್ತರ ಬೆನ್ನ ಮೇಲೆ ಪಾದಸ್ಪರ್ಶ ಮಾಡಿದರೆ ಮೈ–ಮನಸ್ಸಿಗೆ ಆವರಿಸಿಕೊಂಡಿರುವ ರೋಗ– ರುಜಿನ, ವಿಶೇಷವಾಗಿ ಚರ್ಮ ರೋಗ ವಾಸಿ ಆಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿರುವ ಪ್ರತೀತಿ.
ಜಾತ್ರೆಗೆ ದಾವಣಗೆರೆ ಜಿಲ್ಲೆ ಸೇರಿದಂತೆ ನೆರೆಯ ಬಳ್ಳಾರಿ, ಹಾವೇರಿ, ಗದಗ ಹಾಗೂ ಚಿತ್ರದುರ್ಗ ಜಿಲ್ಲೆ ಸೇರಿದಂತೆ ವಿವಿಧ ಮೂಲೆಗಳಿಂದ ಭಕ್ತರ ಸಾಗರವೇ ಹರಿದು ಬಂದಿತ್ತು. ಸವರ್ಣೀಯರು ಸೇರಿದಂತೆ ವಿವಿಧ ಜಾತಿ, ಜನಾಂಗದ ಜನ ಜಾತ್ರೆಯಲ್ಲಿ ಸೇರಿದ್ದರು.
ಹರಕೆ ತೀರಿಸಿದ ಶಾಸಕ!
ದಂಡಿನ ದುರುಗಮ್ಮದೇವಿ ಜಾತ್ರೆಯಲ್ಲಿ ಭಕ್ತರ ಸಾಲಿನಲ್ಲಿ ಬೋರಲು ಮಲಗಿ ಜಗಳೂರು ಕ್ಷೇತ್ರದ ಶಾಸಕ ಎಚ್.ಪಿ.ರಾಜೇಶ್ ಅವರೂ ಹರಕೆ ತೀರಿಸಿದರು.