ಬೆಂಗಳೂರು: ಲಿಂಗರಾಜಪುರ ಮೇಲ್ಸೇತುವೆಯ ಆರಂಭದಲ್ಲಿ ಬುಧವಾರ ಸಂಜೆ ಬಿಎಂಟಿಸಿ ಬಸ್, ಸರಕು ಸಾಗಣೆ ಆಟೊ ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಎಚ್ಬಿಆರ್ ಲೇಔಟ್ನ ಮಹಮದ್ ಹುಸೇನ್ (43), ಗೋವಿಂದಪುರದ ನಿವಾಸಿ ಕೆ.ಅಸ್ಲಂ (36) ಮತ್ತು ಕೆ.ಜಿ.ಹಳ್ಳಿಯ ನಿವಾಸಿ ಸೈಯದ್ ಮುನೀರ್ (50) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.
ಘಟನೆಯಲ್ಲಿ ಅಸ್ಫರ್ (41), ಫಾರೂಕ್ ಅಹಮದ್ (24) ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಮೇಶ್ (33) ಮತ್ತು ಅವರ ಪತ್ನಿ ಸುಶೀಲಾ (27) ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಎಂಟಿಸಿ 10ನೇ ಡಿಪೊಗೆ ಸೇರಿದ ಶಿವಾಜಿನಗರ–ಹೆಣ್ಣೂರು ಮಾರ್ಗದ ಬಸ್ (ಮಾರ್ಗ ಸಂಖ್ಯೆ 292 ಎಫ್) ಹೆಣ್ಣೂರು ಕಡೆಗೆ ಹೋಗುತ್ತಿದ್ದಾಗ ಸಂಜೆ 7.10ರ ಸುಮಾರಿಗೆ ಲಿಂಗರಾಜಪುರ ಮೇಲ್ಸೇತುವೆಯ ಆರಂಭದಲ್ಲಿ ಬ್ರೇಕ್ ವಿಫಲವಾಗಿದೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ವಿಭಜಕದ ಮೇಲೆ ಹತ್ತಿದೆ. ಆಗ, ಚಾಲಕ ಬಸ್ಸನ್ನು ಬಲಕ್ಕೆ ತಿರುಗಿಸಿದ್ದರಿಂದ ಏಕಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಗೆ ಬಸ್ ನುಗ್ಗಿದೆ. ಎದುರುಗಡೆಯಿಂದ ಬರುತ್ತಿದ್ದ ಎರಡು ಸರಕು ಸಾಗಣೆ ಆಟೊ ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಬಸ್ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಬೈಕ್ ಮತ್ತು ಸರಕು ಸಾಗಣೆ ಆಟೊಗಳು ನಜ್ಜುಗುಜ್ಜಾಗಿವೆ. ಘಟನೆ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ದಟ್ಟಣೆ: ಘಟನೆಯಿಂದಾಗಿ ಲಿಂಗರಾಜಪುರ ಮೇಲ್ಸೇತುವೆ ಬಳಿ 2 ತಾಸಿಗೂ ಹೆಚ್ಚು ಕಾಲ ವಾಹನಗಳು ಕಿ.ಮಿ.ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು. ನಂತರ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಇಬ್ಬರ ಸ್ಥಿತಿ ಗಂಭೀರ
‘ಲಿಂಗರಾಜಪುರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಒಬ್ಬರ ತಲೆಗೆ ತೀವ್ರ ಪೆಟ್ಟಾಗಿದ್ದು, ನಿಮ್ಹಾನ್ಸ್ಗೆ ಸೇರಿಸಲಾಗಿದೆ. ಇನ್ನೊಬ್ಬರ ಮೂಳೆ ಮುರಿದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ’
–ಡಾ. ಸಯ್ಯದ್ ಇಕ್ಬಾಲ್ ಷಾ ಖಾದ್ರಿ,
ನಿರ್ದೇಶಕ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ.