ನವದೆಹಲಿ, ಡಿ.28: ಇಂಡೋನೇಷ್ಯಾದಿಂದ ಸಿಂಗಪೂರ್‌ಗೆ ಹೊರಟಿದ್ದ 162 ಮಂದಿ ಪ್ರಯಾಣಿಸುತ್ತಿದ್ದ ಏರ್‌ಏಷ್ಯಾ QZ-8501 ವಿಮಾನ ನಿಗೂಢವಾಗಿ ನಾಪತ್ತೆಯಾಗಿದೆ. 320-200 ವಿಮಾನದಲ್ಲಿ 155 ಮಂದಿ ಪ್ರಯಾಣಿಕರು ಹಾಗೂ 7 ಜನ ಸಿಬ್ಬಂದಿ ಸೇರಿ ಒಟ್ಟು 162 ಮಂದಿ ಪ್ರಯಾಣಿಸುತ್ತಿದ್ದರು.
ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ 149 ಜನ ಇಂಡೋನೇಷ್ಯಾದವರು, ಮೂವರು ಕೊರಿಯಾದವರು, ಸಿಂಗಪೂರ್, ಬ್ರಿಟನ್ ಹಾಗೂ ಮಲೇಷ್ಯಾದ ತಲಾ ಒಬ್ಬರಿದ್ದರು ಎಂದು ವಿಮಾನ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ 5.30ಕ್ಕೆ ಇಂಡೋನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಏರ್ ಏಷ್ಯಾ ಕಂಪೆನಿಯ QZ-8501ವಿಮಾನ ಬೆಳಿಗ್ಗೆ 8.30ಕ್ಕೆ ಸಿಂಗಪೂರ್‌ಗೆ ಬಂದಿಳಿಯಬೇಕಾಗಿತ್ತು. ಆದರೆ, ಮುಂಜಾನೆ 6.17ರ ಸುಮಾರಿಗೆ ರಾಡಾರ್ ಸಂಪರ್ಕ ಕಡಿದುಕೊಂಡಿತ್ತು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ಅಧಿಕಾರಿ ಹಾಡಿ ಮುಸ್ತಫಾ ತಿಳಿಸಿದ್ದಾರೆ.
ವಿಮಾನ ಟೇಕ್ ಆಫ್ ಆದ 47 ನಿಮಿಷಗಳ ನಂತರ ಸುರಬಯಾ ನಿಲ್ದಾಣದ ಸಂಪರ್ಕ ಕಡಿದುಕೊಂಡಿತ್ತು. ಆದರೆ, 7.24ರ ಸುಮಾರಿನಲ್ಲಿ ಜಕಾರ್ತಾ ವಿಮಾನ ನಿಲ್ದಾಣದ ಸಂಪರ್ಕಕ್ಕೆ ಸಿಕ್ಕಿತ್ತು ಮತ್ತು ಬೇರೆ ಮಾರ್ಗದ ಬಗ್ಗೆ ಕೇಳಿತ್ತು ಎಂದು ಮುಸ್ತಫಾ ಹೇಳಿದ್ದಾರೆ. ಏರ್‌ಏಷ್ಯಾ QZ-8501 ಏರ್ ಬಸ್ ಇಂದು ಬೆಳಿಗ್ಗೆ 8.30ಕ್ಕೆ ಸಿಂಗಪೂರ್‌ನ ಚಾಂಗಿ ವಿಮಾನ ನಿಲ್ದಾಣ ತಲುಪಬೇಕಾಗಿತ್ತು. ಈ ಹಿಂದೆ ಸುಮಾರು 370ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಮಲೇಷ್ಯಾ ವಿಮಾನ ಹೀಗೆಯೇ ನಾಪತ್ತೆಯಾಗಿ ಇದುವರೆಗೂ ವಿಮಾನ ಅಥವಾ ಅದರಲ್ಲಿದ್ದ ಪ್ರಯಾಣಿಕರ ಪತ್ತೆಯಾಗಿಲ್ಲ.