ಕರ್ನಾಟಕ

ಹಾಸನದಲ್ಲಿ ರೌಡಿ ಮಂಜ ಬರ್ಬರ ಹತ್ಯೆ

Pinterest LinkedIn Tumblr

Hasana-Murder

ಹಾಸನ, ಡಿ.28: ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಯೊಬ್ಬನನ್ನು ವಿರೋಧಿ ಗುಂಪಿನವರು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಗರದಲ್ಲಿ ನಡೆದಿದೆ.ಮಂಜು(31) ಕೊಲೆಯಾದ ರೌಡಿ. ನಿನ್ನೆ ರಾತ್ರಿ 10.30ರಲ್ಲಿ ನಗರದ ಸಹ್ಯಾದ್ರಿ ಟಾಕೀಸ್ ಎದುರು ರೌಡಿ ಮಂಜನನ್ನು ಕೊಲೆ ಮಾಡಲಾಗಿದೆ.

ಗ್ಯಾರಹಳ್ಳಿ ತಮ್ಮಯ್ಯನ ಕೊಲೆ ಪ್ರಕರಣದಲ್ಲಿ ಮಂಜು ಆರೋಪಿಯಾಗಿದ್ದ, ಈ ಪ್ರಕಣ ಖುಲಾಷೆಯಾಗಿದ್ದರಿಂದ ಮೂರು ವರ್ಷಗಳ ಹಿಂದೆ ಈತ ಬಿಡುಗಡೆಗೊಂಡಿದ್ದ. ರೌಡಿ ಚೈಲ್ಡ್ ರವಿಗೂ ಈತನಿಗೂ ಬದ್ಧ ದ್ವೇಷವಿತ್ತೆಂದು ಹೇಳಲಾಗುತ್ತಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಚೈಲ್ಡ್ ರವಿಯ ಸಹಚರರೇ ಈತನನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಸಹ್ಯಾದ್ರಿ ಟಾಕೀಸ್ ಮೇಲ್ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ನಗರ ಠಾಣೆ ಪೊಲೀಸರು ಕ್ಯಾಮೆರಾ ವಶಪಡಿಸಿಕೊಂಡು ಅದರಲ್ಲಿ ದಾಖಲಾಗಿರುವ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸಿಸಿ ಕ್ಯಾಮೆರಾದಲ್ಲಿ ಕೊಲೆಗಾರರ ಚಹರೆ ಪತ್ತೆಯಾದರೆ ಸಂಜೆ ವೇಳೆಗೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ನಿನ್ನೆ ಸಂಜೆ ಮಂಜು ತನ್ನ ಸ್ನೇಹಿತರೊಡನೆ ಪ್ರಸಿದ್ಧ ಪಾಳುಬಿದ್ದ ಶೆಟ್ಟಿಹಳ್ಳಿ ಚರ್ಚ್‌ಗೆ ಹೋಗಿ ಪಾರ್ಟಿ ಮಾಡಿ ರಾತ್ರಿ ಸಹ್ಯಾದ್ರಿ ಟಾಕೀಸ್ ಬಳಿ ತಿಂಡಿ ತಿನ್ನುತ್ತಿದ್ದ. ಈ ವೇಳೆ ಏಕಾಏಕಿ ಕೆಲವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

Write A Comment