ಜಕಾರ್ತ: (ಪಿಟಿಐ): ಇಂಡೊನೇಷ್ಯಾ ದಿಂದ 162 ಜನರನ್ನು ಕರೆದೊಯ್ಯುತ್ತಿದ್ದ ಮಲೇಷ್ಯಾದ ಮತ್ತೊಂದು ವಿಮಾನ ಭಾನುವಾರ ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದೆ. ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಬೆಳಗಿನ ಜಾವ 5.20ಕ್ಕೆ ಹೊರಟ ಏರ್‌ಏಷ್ಯಾ ಖಾಸಗಿ ವಿಮಾನ ಯಾನ ಸಂಸ್ಥೆಗೆ ಸೇರಿದ ವಿಮಾನ (ಕ್ಯುಜಡ್ 8501) ಬೆಳಿಗ್ಗೆ 8.30ಕ್ಕೆ ಸಿಂಗಪುರದ ಚಾಂಗಿ ನಿಲ್ದಾಣ ತಲುಪಬೇಕಿತ್ತು.
ವಿಮಾನ ಇಂಡೊನೇಷ್ಯಾದಿಂದ ಹೊರಟ 42 ನಿಮಿಷಗಳಲ್ಲಿ ವಿಮಾನ ಸಂಚಾರ ನಿಯಂತ್ರಣ ಕೇಂದ್ರದ (ಏರ್ ಟ್ರಾಫಿಕ್ ಕಂಟ್ರೋಲ್–ಎಟಿಸಿ) ಸಂಪರ್ಕ ಕಳೆದುಕೊಂಡಿತು. ವಿಮಾನ ಎಲ್ಲಿದೆ ಎಂಬ ಬಗ್ಗೆ ಸುಳಿವು ಇದುವರೆಗೂ ಸಿಕ್ಕಿಲ್ಲ. ಇದೇ ವರ್ಷಾರಂಭದಲ್ಲಿ ಮಲೇಷ್ಯಾದ ಎಂಎಚ್ 370 ವಿಮಾನ ಹಠಾತ್ತಾಗಿ ಕಣ್ಮರೆಯಾಗಿತ್ತು. ಇದು ಕಣ್ಮರೆಯಾಗಿದ್ದು ಹೇಗೆ ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ.
ಈ ದುರ್ದೈವಿ ವಿಮಾನದಲ್ಲಿ ಏಳು ಸಿಬ್ಬಂದಿ ಹಾಗೂ 155 ಪ್ರಯಾಣಿಕರು ಸೇರಿದಂತೆ ಒಟ್ಟು 162 ಜನ ಇದ್ದರು. ಇವರಲ್ಲಿ 11 ಮಕ್ಕಳು ಹಾಗೂ ಒಂದು ಹಸುಗೂಸು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದಲ್ಲಿ ಭಾರತದವರು ಯಾರೂ ಇರಲಿಲ್ಲ ಎನ್ನಲಾಗಿದೆ. ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿ ಪೈಕಿ ಬಹುತೇಕ ಜನರು ಇಂಡೊನೇಷ್ಯಾದವರು.
155 ಪ್ರಯಾಣಿಕರಲ್ಲಿ ಇಂಡೊನೇಷ್ಯಾದ 149, ಕೊರಿಯಾದ ಮೂವರು, ಬ್ರಿಟನ್, ಸಿಂಗಪುರ, ಮಲೇಷ್ಯಾದ ತಲಾ ಒಬ್ಬರು ಇದ್ದರು. ಏಳು ಸಿಬ್ಬಂದಿ ಪೈಕಿ ಪ್ರಾನ್ಸ್‌ನ ಸಹ ಪೈಲಟ್ ಹೊರತುಪಡಿಸಿದರೆ ಉಳಿದ 6 ಜನ ಇಂಡೊನೇಷ್ಯಾದವರು. ದಟ್ಟ ಮಂಜು ಹಾಗೂ ಮೋಡ ಕವಿದ ಪ್ರತಿಕೂಲ ಹವಾಮಾನದಿಂದಾಗಿ ಸುಮಾತ್ರಾ ಪೂರ್ವ ಸಾಗರದ ಮಧ್ಯೆ ವಿಮಾನ ಪತನವಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಉಗ್ರರು ವಿಮಾನವನ್ನು ಅಪಹರಿಸಿರಬಹುದು ಎಂಬ ಶಂಕೆಯನ್ನು ತಳ್ಳಿ ಹಾಕಿದ್ದಾರೆ.
ವಿಮಾನ ಕಣ್ಮರೆಯಾದ ಸುಮಾತ್ರ ಪೂರ್ವ ಕರಾವಳಿ ಪ್ರದೇಶದಲ್ಲಿ ಮಂದ ಬೆಳಕು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ. ತೀವ್ರ ಪ್ರತಿಕೂಲ ವಾತಾವರಣದ ಆತಂಕದಲ್ಲಿದ್ದ ಪೈಲಟ್ ಕೊನೆಯ ಗಳಿಗೆಯಲ್ಲಿ ವಿಮಾನ ಪ್ರಯಾಣದ ವೇಳೆಯನ್ನು ಬದಲಿಸುವಂತೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ನಾಪತ್ತೆಯಾಗಿರುವ ಏರ್‌ಏಷ್ಯಾ ವಿಮಾನ ಪತ್ತೆಹಚ್ಚಲು ಇಂಡೊನೇಷ್ಯಾದ ಎರಡು ಸೇನಾ ವಿಮಾನಗಳು ಸಾಗರದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಒಂದು ದಿನದ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾತ್ರಾ ಬಳಿ ಪತನ ಶಂಕೆ
ಸುಮಾತ್ರಾ ಪೂರ್ವ ಭಾಗಕ್ಕಿರುವ ಬೆಲಿನ್‌ಟುಂಗ್ ಸಾಗರದಲ್ಲಿ ವಿಮಾನ ಪತನಗೊಂಡ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಪತನಗೊಂಡ ನಿರ್ದಿಷ್ಟ ಸ್ಥಳ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿವೆ. ಆದರೆ, ಇಂಡೊನೇಷ್ಯಾ ಸಾರಿಗೆ ಸಚಿವ ಲಿವೊ ಟಿಯಾಂಗ್ ಲೈ ಅವರು ವ್ಯತಿರಿಕ್ತ ಹೇಳಿಕೆ ನೀಡಿ, ‘ಬೆಲಿನ್‌ಟುಂಗ್ ಸಾಗರದಲ್ಲಿ ವಿಮಾನದ ಯಾವೊಂದು ಅವಶೇಷದ ತುಣುಕೂ ಪತ್ತೆಯಾಗಿಲ್ಲ. ಮಾಧ್ಯಮ ವರದಿಗಳು ಸಂಪೂರ್ಣ ಸುಳ್ಳು’ ಎಂದಿದ್ದಾರೆ. ಈ ನಡುವೆ ‘ವಿಮಾನದಲ್ಲಿ ಇಂಧನ ಖಾಲಿಯಾಗಿ ಈ ಅವಘಡ ಸಂಭವಿಸಿರುವ ಸಾಧ್ಯತೆ ಇಲ್ಲ. ಅದರಲ್ಲಿ ಸಾಕಷ್ಟು ಇಂಧನ ತುಂಬಲಾಗಿತ್ತು’ ಎಂದು ಇಂಡೊನೇಷ್ಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೃಢಪಡಿಸಿದ ಏರ್‌ಏಷ್ಯಾ
‘ಇಂಡೊನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಪುರಕ್ಕೆ ಹೊರಟ ಕ್ಯುಜಡ್ 8501 ವಿಮಾನ ಸ್ಥಳೀಯ ಕಾಲಮಾನ 7.24ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿಸಲು ವಿಷಾದಿಸುತ್ತೇವೆ’ ಎಂದು ಏರ್ಏಷ್ಯಾ ಫೇಸ್‌ಬುಕ್‌ನಲ್ಲಿ ಹೇಳಿದೆ.
‘ವಿಮಾನ ಸಂಪರ್ಕ ಕಳೆದುಕೊಳ್ಳುವ ಮೊದಲು ಪೈಲಟ್ ಪರ್ಯಾಯ ಮಾರ್ಗಕ್ಕಾಗಿ ಇಂಡೊನೇಷ್ಯಾದ ವಿಮಾನ ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ಮನವಿ ಮಾಡಿದ್ದ’ ಎಂದೂ ಅದು ಹೇಳಿದೆ. ‘ಎಟಿಸಿ ಸಂಪರ್ಕ ಕಳೆದುಕೊಳ್ಳುವ ಮೊದಲು ಪೈಲಟ್ ಬೇರೊಂದು ಮಾರ್ಗ ತೋರಿಸುವಂತೆ ಮನವಿ ಮಾಡಿಕೊಂಡಿದ್ದ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವಾಲಯದ ಅಧಿಕಾರಿ ಹಾಡಿ ಮುಸ್ತಾಫಾ ಬಹಿರಂಗಪಡಿಸಿದ್ದಾರೆ.
ದಟ್ಟವಾದ ಮೋಡಗಳನ್ನು ತಪ್ಪಿಸಿಕೊಳ್ಳಲು ವಿಮಾನ ಹಾರುತ್ತಿದ್ದ ಎತ್ತರವನ್ನು 32 ಸಾವಿರ ಅಡಿಯಿಂದ 38 ಸಾವಿರ ಅಡಿಗೆ ಎತ್ತರಿಸಲು ಅವಕಾಶ ನೀಡಲು ಪೈಲಟ್ ಎಟಿಸಿಗೆ ಮನವಿ ಮಾಡಿದ್ದ. ‘ವಿಮಾನ ಕಾಣೆಯಾದ ಸುಮಾತ್ರಾ ಪ್ರದೇಶದ 50 ಸಾವಿರ ಅಡಿ ಎತ್ತರದಲ್ಲಿ ಭಾರಿ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆ ಮತ್ತು ಬಿರುಗಾಳಿ ಬೀಸುತ್ತಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಕಣ್ಮರೆ ಸುದ್ದಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಜ್ಜಾಗಿದ್ದ ಜನರನ್ನು ಬೆಚ್ಚಿ ಬೀಳಿಸಿದೆ.
ಮಲೇಷ್ಯಾ ವಿಮಾನದ ಮೂರನೇ ದುರಂತ
* ಇತ್ತೀಚಿನ ದಿನಗಳಲ್ಲಿ ಮಲೇಷ್ಯಾ ವಿಮಾನ ಅಪಘಾತಕ್ಕೆ ಒಳಗಾಗಿರುವ ಮೂರನೇ ಪ್ರಕರಣ ಇದಾಗಿದೆ.
* ಮೊದಲಿಗೆ, ಕ್ವಾಲಾಂಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್‌್ಸನ ಎಂಎಚ್ 370 ಬೋಯಿಂಗ್ ವಿಮಾನ ಇದೇ ಮಾರ್ಚ್ 8ರಂದು ಹಠಾತ್ತಾಗಿ ನಾಪತ್ತೆಯಾಗಿತ್ತು. ಹಲವು ದೇಶಗಳು ಸೇರಿ ಆಧುನಿಕ ಸಲಕರಣೆಗಳ ನೆರವಿನಿಂದ ಹಿಂದೂ ಮಹಾಸಾಗರದ ವಿಶಾಲ ಪ್ರದೇಶವನ್ನು ಜಾಲಾಡಿದ ನಂತರವೂ ವಿಮಾನದ ಒಂದೇ ಒಂದು ತುಣುಕು ಅವಶೇಷ ಕೂಡ ಪತ್ತೆಯಾಗಿಲ್ಲ.
* ಆಮ್‌ಸ್ಟರ್‌ಡ್ಯಾಮ್‌ನಿಂದ ಕ್ವಾಲಾಲಂಪುರಕ್ಕೆ ಹೋಗುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್ ಎಂಎಚ್ 17 ಬೋಯಿಂಗ್ ವಿಮಾನವು ಇದೇ ಜುಲೈ 17ರಂದು ಪೂರ್ವ ಉಕ್ರೇನ್‌ನ ಬಂಡುಕೋರರ ವಶದಲ್ಲಿರುವ ಪ್ರದೇಶದ ಮೇಲೆ ಹಾರುತ್ತಿದ್ದಾಗ ಗುಂಡು ಹಾರಿಸಿ ಹೊಡೆದುರುಳಿಸಲಾಯಿತು. ಅದರಲ್ಲಿದ್ದ 298 ಜನ ಸಾವಿಗೀಡಾಗಿದ್ದರು.
ಏರ್‌ಏಷ್ಯಾಕ್ಕೆ ಮೊದಲ ದುರಂತ
ಮಲೇಷ್ಯಾ ಮೂಲದ ಏರ್‌ಏಷ್ಯಾ ಕಂಪೆನಿಯು ದಕ್ಷಿಣ ಏಷ್ಯಾ ವಲಯದಲ್ಲಿ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಟೋನಿ ಫರ್ನಾಂಡಿಸ್ ಇದರ ಮಾಲೀಕತ್ವ ಹೊಂದಿದ್ದಾರೆ. ಇತ್ತೀಚೆಗೆ ಭಾರತಕ್ಕೂ ತನ್ನ ಸೇವೆ ವಿಸ್ತರಿಸಿರುವ ಈ ಕಂಪೆನಿಯ ಸೇವೆ ಸುರಕ್ಷತೆಗೆ ಹೆಸರಾಗಿತ್ತು. ಈ ಮುನ್ನ ಈ ಕಂಪೆನಿಯ ಯಾವುದೇ ವಿಮಾನ ಈ ರೀತಿ ಅಪಘಾತಕ್ಕೆ ಒಳಗಾಗಿರಲಿಲ್ಲ ಎನ್ನಲಾಗಿದೆ.