ಬೆಂಗಳೂರು: ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶಗಳ ಗ್ರಾಮಗಳ ಸಂಖ್ಯೆ ಕಡಿಮೆ ಮಾಡುವ ಚೌಕಾಸಿ ವ್ಯಾಪಾರಕ್ಕೆ ಸರ್ಕಾರ ಇಳಿಯಬಾರದು. ಈ ವರದಿಯ ವೈಜ್ಞಾನಿಕ ಪುನರ್ ವಿಮರ್ಶೆ ಮಾಡಬೇಕು ಎಂದು ಶಾಸಕ ವೈ.ಎಸ್.ವಿ.ದತ್ತ ಆಗ್ರಹಿಸಿದರು.
ಶೃಂಗೇರಿಯ ಶಿಕ್ಷಣ ಸ್ನೇಹಿ ಟ್ರಸ್ಟ್, ಮಲೆನಾಡ ಮಿತ್ರವೃಂದ, ಸಹ್ಯಾದ್ರಿ ಸಂಘ, ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಗಾಂಧಿ ಭವನದಲ್ಲಿ ಭಾನುವಾರ ನಡೆದ ‘ಮಲೆನಾಡಿಗರನ್ನು ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪಶ್ಚಿಮ ಘಟ್ಟದ 1,200 ಗ್ರಾಮಗಳನ್ನು ಪರಿಸರಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿಯಲ್ಲಿ ತಿಳಿಸಲಾಗಿದೆ. ಈ ಗ್ರಾಮಗಳ ಸಂಖ್ಯೆಯನ್ನು 800ಕ್ಕೆ ಇಳಿಸಲು ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ. ಇದೊಂದು ರೀತಿಯ ಚೌಕಾಸಿ ವ್ಯಾಪಾರ. ಇದರಿಂದ ಇನ್ನಷ್ಟು ದೂರಗಾಮಿ ದುಷ್ಪರಿಣಾಮಗಳು ಉಂಟಾಗಲಿವೆ’ ಎಂದು ಅವರು ಎಚ್ಚರಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ನೀಡಿರುವ ಸರ್ಕಾರಿ ಭೂಮಿ ಒತ್ತುವರಿಯ ವರದಿಯ ಶಿಫಾರಸುಗಳನ್ನು ಒಪ್ಪಿಕೊಂಡ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಇನ್ನೊಂದೆಡೆ, ಈ ವರದಿಯ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಅಡ್ವೋಕೇಟ್ ಜನರಲ್ ಹೈಕೋರ್ಟ್ನಲ್ಲಿ ಹೇಳುತ್ತಾರೆ. ಸರ್ಕಾರ ಈ ವರದಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಲಿ. ಆರಂಭಿಕ ಹಂತದಲ್ಲಿ ನಗರ ಹಾಗೂ ಪಟ್ಟಣಗಳ ಬಲಾಢ್ಯ ಒತ್ತುವರಿದಾರರನ್ನು ತೆರವುಗೊಳಿಸಲಿ ಎಂದು ಅವರು ಸವಾಲು ಎಸೆದರು.
ವರದಿ ತಿರಸ್ಕಾರ ಅಧಿಕಾರ ಕೇಂದ್ರಕ್ಕೆ
ಕೊಡಗು ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ಸ್ಥಳೀಯರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ತಲುಪಿಸುತ್ತೇವೆ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಅಥವಾ ತಿರಸ್ಕರಿಸುವುದು ಕೇಂದ್ರಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ವರದಿ ತಿರಸ್ಕರಿಸಿದರೆ ರಾಜ್ಯದ ಯಾವುದೇ ಆಕ್ಷೇಪವಿಲ್ಲ.
– ಮುಖ್ಯಮಂತ್ರಿ ಸಿದ್ದರಾಮಯ್ಯ (ವಿರಾಜಪೇಟೆ ಬಳಿಯ ಬಾಳುಗೋಡುವಿನಲ್ಲಿ ಹೇಳಿಕೆ)
ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಜನಾಭಿಪ್ರಾಯ ಸಂಗ್ರಹಿಸಿ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಿಲ್ಲ. ಈ ವರದಿ ವೈಜ್ಞಾನಿಕ ಅಲ್ಲ. ವರದಿಯ ಕೆಲವು ಶಿಫಾರಸುಗಳನ್ನು ಮಾತ್ರ ಒಪ್ಪಿಕೊಳ್ಳಬಹುದು’ ಎಂದರು. ‘ಅರಣ್ಯ ನಾಶ ಮಾಡುತ್ತಿರುವರು ಅರಣ್ಯ ವಾಸಿಗಳಲ್ಲ. ಅವರು ಅರಣ್ಯ ರಕ್ಷಕರು. ಮರಗಳನ್ನು ಕಡಿದು ಸುಂದರ ಮನೆಗಳನ್ನು ನಿರ್ಮಿಸುವವರು ನಗರವಾಸಿಗಳು. ಇದರಿಂದ ಅರಣ್ಯ ನಾಶ ಆಗುತ್ತಿದೆ. ಇಂತಹ ಚಟುವಟಿಕೆಗೆ 20 ವರ್ಷಗಳ ನಿರ್ಬಂಧ ವಿಧಿಸಿದರೆ ಅರಣ್ಯ ಉಳಿಯುತ್ತದೆ’ ಎಂದು ಸಲಹೆ ನೀಡಿದರು.
ವಕೀಲ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯಲ್ಲಿ ರೈತ ವರ್ಗದ ಪ್ರತಿನಿಧಿಗಳು ಇರಲಿಲ್ಲ. ಇದ್ದಿದ್ದರೆ ಇಂತಹ ಶಿಫಾರಸುಗಳನ್ನು ನೀಡುತ್ತಿರಲಿಲ್ಲ. ವರದಿಯ ಶಿಫಾರಸು ಜನವಿರೋಧಿ. ದುರಂತವೆಂದರೆ ಜನರ ಸಹಕಾರದಿಂದ ಜಲವಿದ್ಯುತ್ ಯೋಜನೆಗಳನ್ನು ಜಾರಿಗೆ ತರಬಹುದು ಎಂಬ ಶಿಫಾರಸು ಮಾಡಲಾಗಿದೆ’ ಎಂದರು. ಕೇರಳದಲ್ಲಿ ಗಣಿ ಹಾಗೂ ಮರಳು ಉದ್ಯಮಿಗಳ ಪ್ರಾಯೋಜಕತ್ವದಲ್ಲಿ ಈ ವರದಿಯ ಪರ ಚಳವಳಿ ನಡೆದಿದೆ. ಈ ವರದಿಗೆ ಬೆಂಬಲ ಸೂಚಿಸುವವರು ಇಂಥವರೇ ಎಂದು ಅವರು ಕಿಡಿಕಾರಿದರು.
‘ಕೃಷಿ ಮತ್ತು ಸಂಸ್ಕೃತಿ ನಡುವೆ ಪರಸ್ಪರ ಸಂಬಂಧ ಇದೆ. ಕೃಷಿ ಉಳಿಸದಿದ್ದರೆ ಮಲೆನಾಡಿನ ಅನನ್ಯತೆ ನಾಶವಾಗಲಿದೆ. ಮಲೆನಾಡು ಬ್ರಾಹ್ಮಣರು ಹಾಗೂ ಗೌಡರಿಗೆ ಸೀಮಿತ ಅಲ್ಲ. ಈ ಮಲೆನಾಡು ಗಿರಿಜನರು, ಸೇರೆಗಾರರು, ದಲಿತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸೇರಿದ್ದು. ಅವರ ಹಕ್ಕುಗಳ ರಕ್ಷಣೆ ಆಗಬೇಕು’ ಎಂದು ಅವರು ಪ್ರತಿಪಾದಿಸಿದರು. ಕಾಂಗ್ರೆಸ್ ಮುಖಂಡ ಸಚಿನ್ ಮಿಗಾ, ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ, ಶಿಕ್ಷಣ ಸ್ನೇಹಿ ಟ್ರಸ್ಟ್ನ ಅನಿಲ್ ಹೊಸಕೊಪ್ಪ, ಜಯಪ್ರಕಾಶ್ ಹೊಸಮನೆ, ಸಂದೇಶ್ ಗೌಡ ಹಂದ್ಗೋಡ್, ರಾಜಶೇಖರ್ ಕಿಗ್ಗಾ ಇದ್ದರು.
ವರದಿ ತಿರಸ್ಕಾರ ಅಧಿಕಾರ ಕೇಂದ್ರಕ್ಕೆ
ಕೊಡಗು ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ಸ್ಥಳೀಯರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ತಲುಪಿಸುತ್ತೇವೆ. ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಅಥವಾ ತಿರಸ್ಕರಿಸುವುದು ಕೇಂದ್ರಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ವರದಿ ತಿರಸ್ಕರಿಸಿದರೆ ರಾಜ್ಯದ ಯಾವುದೇ ಆಕ್ಷೇಪವಿಲ್ಲ.
– ಮುಖ್ಯಮಂತ್ರಿ ಸಿದ್ದರಾಮಯ್ಯ (ವಿರಾಜಪೇಟೆ ಬಳಿಯ ಬಾಳುಗೋಡುವಿನಲ್ಲಿ ಹೇಳಿಕೆ)