ಮಂಗಳೂರು, ಡಿ.29: ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ವೈಯಕ್ತಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಬದಲು ಕಾರ್ಯಕರ್ತರು ಪಕ್ಷದ ಶಿಸ್ತಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಬೆಳೆಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಬಿ.ರಮಾನಾಥ ರೈ ಕರೆ ನೀಡಿದ್ದಾರೆ. ಅವರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾಂಗ್ರೆಸ್‌ನ 130ನೆ ವರ್ಷದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರಕ್ಕಾಗಿ ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ ಬಂದ ಬಳಿಕ ದೇಶದ ಆರ್ಥಿಕ ಸ್ವಾವಲಂಬನೆಗಾಗಿ ತ್ಯಾಗ ಮಾಡಿದ ನಾಯಕರಲ್ಲಿ ಬಹುತೇಕರು ಕಾಂಗ್ರೆಸ್ಸಿಗರಾಗಿದ್ದಾರೆ. ದೇಶದ ಪ್ರಥಮ ಪ್ರಧಾನಿ ಜವಹಾರಲಾಲ್ ನೆಹರೂ ಏನು ಮಾಡಿದ್ದಾರೆಂದು ಕೇಳುವ ಬಹುತೇಕರಿಗೆ, ಸ್ವಾತಂತ್ರ ಹೋರಾಟದ ಸಂದರ್ಭ ಸುಮಾರು ಒಂಭತ್ತು ವರ್ಷಗಳ ಕಾಲ ಅವರು ಜೈಲಿನಲ್ಲಿ ಕಳೆದಿರುವುದು ತಿಳಿದಿಲ್ಲ. ವರ್ತಮಾನ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ನಡೆಯುತ್ತಿದೆ ಎಂದವರು ಹೇಳಿದರು. ದೇಶದ ಸ್ವಾತಂತ್ರಕ್ಕೆ ಅಹಿಂಸಾ ಮಾರ್ಗದಲ್ಲಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹಾತ್ಮ ಗಾಂಧೀಜಿಯವರನ್ನು ವಿಶ್ವವೇ ಇಂದಿಗೂ ಸ್ಮರಿಸುತ್ತ್ತಿದೆ. ಆದರೆ ಅವರ ವಿರುದ್ಧ ತಪ್ಪುಕಲ್ಪನೆ ಮೂಡಿಸುವ ಒಂದು ವರ್ಗವೇ ಸಮಾಜದಲ್ಲಿದೆ. ಸ್ವಾತಂತ್ರ ದೊರಕಿದ ಬಳಿಕ ದೇಶಕ್ಕೆ ಆರ್ಥಿಕ ಸ್ವಾತಂತ್ರ ಪಡೆಯಲು ಬಹಳ ವರ್ಷಗಳನ್ನೇ ಕಾಯಬೇಕಾಯಿತು. ಈ ಕಾರ್ಯವನ್ನು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣದ ಮೂಲಕ ಬಡವರ ಮನೆಬಾಗಿಲಿಗೆ ಬ್ಯಾಂಕ್‌ಗಳನ್ನು ತಲುಪಿಸಿದ್ದಾರೆ.
ಇಂದು ಅದೇ ಕಾರ್ಯಕ್ರಮವನ್ನು ‘ಜನಧನ್’ ಎಂಬ ಕಾರ್ಯಕ್ರಮದ ರೂಪು ನೀಡುವ ಮೂಲಕ ಪ್ರಚಾರ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಇದಕ್ಕಾಗಿ ಪಕ್ಷದಲ್ಲಿ ಶಿಸ್ತು ಅತ್ಯಗತ್ಯ ಎಂದು ರೈ ನುಡಿದರು. ಪಕ್ಷದ ವಿಚಾರ ಬಂದಾಗ ಶಿಕ್ಷೆ ಆದರೂ, ಅಧಿಕಾರ ಸಿಗದಿದ್ದರೂ ನಾನೆಂದಿಂಗೂ ಕಾಂಗ್ರೆಸ್ಸಿಗನಾಗಿರುತ್ತೇನೆ ಎಂದು ಪಕ್ಷದ ಬಗ್ಗೆ ತಮ್ಮ ನಿಷ್ಠತೆಯನ್ನು ಪ್ರಕಟಿಸಿದ ಸಚಿವ ರೈ, ಕಾಂಗ್ರೆಸ್ ಪಕ್ಷ ಕೇವಲ ಘೋಷಣೆಗಳನ್ನು ಹಾಕಿಕೊಳ್ಳದೆ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದ ಪಕ್ಷ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ತನ್ನ 130 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಏಳು ಬೀಳುಗಳ ಹೊರತಾಗಿಯೂ ತತ್ವ ಸಿದ್ಧಾಂತದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ ಮುಂದುವರಿದಿರುವ ಪಕ್ಷ ಎಂದು ಹೇಳಿದರು.
ಶಾಸಕ ಜೆ.ಆರ್.ಲೋಬೋ ಮಾತನಾಡಿ, ಪಕ್ಷದ ಸಿದ್ಧಾಂತವನ್ನು ಉಳಿಸಿಕೊಂಡು ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಮಾಡಿದ ಜನಪರ ಯೋಜನೆಗಳ ಬಗ್ಗೆ ಯುವ ಜನಾಂಗಕ್ಕೆ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕಾಗಿದೆ ಎಂದರು. ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಈ ಸಂದರ್ಭ ಮಾತನಾಡಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪ ಮೇಯರ್ ಕವಿತಾ ವಾಸು, ನಾಯಕರಾದ ಸುರೇಶ್ ಬಳ್ಳಾಲ್, ಮಮತಾ ಗಟ್ಟಿ, ವಿಶ್ವಾಸ್‌ಕುಮಾರ್ ದಾಸ್, ಶಶಿಧರ ಹೆಗ್ಡೆ, ಪದ್ಮನಾಭ ನರಿಂಗಾನ, ಎ.ಸಿ.ಭಂಡಾರಿ, ಟಿ.ಕೆ.ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.