ಮಂಗಳೂರು, ಡಿ.29: ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸುತ್ತಿದ್ದ ಬೈಕ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಅಗರಮೇಲು ಬಳಿ ಸಂಭವಿಸಿದೆ. ಕೃಷ್ಣಾಪುರ 7ನೆ ಬ್ಲಾಕ್ನ ವಿಶ್ವನಾಥ ದೇವಸ್ಥಾನ ಬಳಿಯ ನಿವಾಸಿಗಳಾದ ನಿಕಿಲ್ರಾಜ್ (22) ಹಾಗೂ ದೀಪಕ್(19) ಮೃತಪಟ್ಟ ಬೈಕ್ ಸವಾರರು ಎಂದು ಗುರುತಿಸಲಾಗಿದೆ.
ಚಾಲನೆಯ ರಭಸ ಯಾವ ಮಟ್ಟದಲ್ಲಿ ಇತ್ತೆಂದರೆ ಬೈಕ್ನಲ್ಲಿದ್ದ ಓರ್ವ ರಸ್ತೆ ಬದಿಯ ಅವರಣಾ ಗೋಡೆ ಹಾರಿ ಬಿದ್ದಿದ್ದರೆ, ಇನ್ನೋರ್ವ ಆವರಣ ಗೋಡೆಯ ಬಳಿ ಬಿದ್ದಿದ್ದ. ಬೈಕ್ ಇನ್ನೊಂದು ಕಡೆ ಬಿದ್ದಿತ್ತು. ಇದರಿಂದ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎನ್ನಲಾಗಿದೆ. ಕೃಷ್ಣಾಪುರದಲ್ಲಿ ಶನಿವಾರ ಕೊರ್ದಬ್ಬು ಕೋಲ ನಡೆದಿದ್ದು, ಅದರಲ್ಲಿ ಭಾಗವಹಿಸಿದ್ದ ಅವರು ಹಸಿವಾಗುತ್ತಿದ್ದುದರಿಂದ ಬೈಕ್ನಲ್ಲಿ ಕ್ಯಾಂಟೀನ್ಗೆ ತೆರಳುತ್ತಿದ್ದ ವೇಳೆ ರಸ್ತೆಯ ಗುಂಡಿ ತಪ್ಪಿಸಲೆಂದು ಬೈಕ್ ತಿರುಗಿಸಿದ್ದೇ ಸ್ಕಿಡ್ಡಾಗಲು ಕಾರಣ ಎಂದು ತಿಳಿದು ಬಂದಿದೆ. ಆಪ್ತ ಸ್ನೇಹಿತರಾಗಿರುವ ನಿಖಿಲ್ರಾಜ್ ಮತ್ತು ದೀಪಕ್ ಜತೆಯಾಗಿಯೇ ಇರುತ್ತಿದ್ದರು. ರಸ್ತೆ ಬದಿಯ ಕಲ್ಲಿಗೆ ಬಡಿದ ಬೈಕ್ ಬಳಿಕ ಕಾಂಪೌಂಡ್ಗೆ ಬಡಿದ ಕುರುಹುಗಳು ಕಾಣುತ್ತಿವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಸಂಚಾರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಹುಮುಖ ಪ್ರತಿಭೆಯ ನಿಖಿಲ್ರಾಜ್ : ‘ಸುಪ್ತ ಮನಸುಗಳು’ ಎನ್ನುವ ಅಡಿ ಬರಹದ ಮೂಲಕ ‘ಬದುಕ ಪಯಣ’ ಎಂಬ ಕಿರು ಚಿತ್ರ ನಿರ್ಮಿಸಿ ಬದುಕಿನ ಇನ್ನೊಂದು ಮುಖವನ್ನು ಅಭಿವ್ಯಕ್ತಗೊಳಿಸಿದ ಬಹುಮುಖ ಪ್ರತಿಭೆಯ ನಿಖಿಲ್ರಾಜ್. ಆದರೆ ‘ಬದುಕ ಪಯಣ’ ಅನಾವರಣಗೊಳ್ಳುವ ಮುನ್ನವೇ ಸ್ನೇಹಿತ ಸಮೇತ ದುರಂತಕ್ಕೆ ಬಲಿಯಾಗಿದ್ದಾರೆ. ನಿಖಿಲ್ ರಾಜ್ ಪ್ರತಿಭಾನ್ವಿತ ಯುವಕ. ತನ್ನ ಕೆಲವು ಮಿತ್ರರ ಜೊತೆ ಸೇರಿ ಯುವ ಮನಸುಗಳ ಜೀವನದ ಸುತ್ತಾ ಕಥೆಯಿರುವ ‘ಬದುಕ ಪಯಣ’ ಎನ್ನುವ ಕಿರುಚಿತ್ರ ನಿರ್ಮಿಸಿದ್ದ. ‘ಬೆಸ್ಟ್ಮೈಂಡೆಡ್ ಬ್ರದರ್ಸ್’ ಎಂದು ತಮ್ಮ ಬಳಗಕ್ಕೆ ಹೆಸರನ್ನೂ ನೀಡಿದ್ದ. ಈ ಚಿತ್ರದ ಬಳಿಕ ಒಂದೂವರೆ ತಾಸು ಅವಯ ಇನ್ನೊಂದು ಸಾಮಾಜಿಕ ಕಿರುಚಿತ್ರ ರೂಪಿಸುವ ಬಗ್ಗೆ ಕನಸು ಕಾಣುತ್ತಿದ್ದ ಎಂದು ತಿಳಿದು ಬಂದಿದೆ.
ಕಾಲೇಜು ಶಿಕ್ಷಣ ಪಡೆಯುತ್ತಿದ್ದರೂ ಅದರ ಜೊತೆಗೆ ಪೋಟೋಗ್ರಾಫಿಯನ್ನೂ ಮಾಡುತ್ತಿದ್ದ ನಿಖಿಲ್ ಮಿತ ಭಾಷಿಯಾಗಿದ್ದ. ಈತ ನಿರ್ಮಿಸಿದ ಚಿತ್ರ ಸ್ಥಳೀಯ ಟಿ.ವಿ. ವಾಹಿನಿಯಲ್ಲಿ ಪ್ರಸಾರಗೊಳ್ಳುವ ಮುನ್ನ ಇಹಲೋಕ ತ್ಯಜಿಸಿದ್ದಾನೆ. ದೀಪಕ್ ಕೂಡಾ ಸದಾ ನಿಖಿಲ್ರಾಜ್ ಜೊತೆ ಇರುವ ಯುವಕ ಎಂದು ಸ್ಥಳೀಯರು ತಿಳಿಸಿದ್ದಾರೆ.