ಕನ್ನಡ ವಾರ್ತೆಗಳು

ಮೂಡುಬಿದಿರೆ: ಅರಣ್ಯ ಪ್ರದೇಶಗಳೆಡೆಗೆ ಸಚಿವ ಅಭಯಚಂದ್ರ ನಡಿಗೆ

Pinterest LinkedIn Tumblr

abhay_achandr_fores

ಮೂಡುಬಿದಿರೆ, ಡಿ.30  : ವಿವಿಧ ಕಾರ್ಯಕ್ರಮಗಳಲ್ಲಿ ಬಿಝಿಯಾಗಿ ಪ್ರತಿದಿನ ತನ್ನ ಕಾರ್‌ನಲ್ಲಿಯೇ ಓಡಾಡುತ್ತಿದ್ದ ಸಚಿವ ಅಭಯಚಂದ್ರ ಜೈನ್ ಅವರು, ಸೋಮವಾರ 2 ಗಂಟೆಗಳ ಬಿಡುವು ಮಾಡಿಕೊಂಡು ಮೂಡುಬಿದಿರೆ ರೇಂಜ್‌ನ ಮೀಸಲು ಅರಣ್ಯ ಪ್ರದೇಶಗಳೆಡೆಗೆ ನಡೆದುಕೊಂಡು ಹೋಗಿ ಅರಣ್ಯ ಇಲಾಖೆಯ ವತಿಯಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಗೆ ಶಹಬ್ಬಾಸ್ ಎಂದಿದ್ದಾರೆ.

ತನ್ನ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶಗಳಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಸಚಿವರನ್ನು ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್ ಸ್ವಾಗತಿಸಿ, ಬೆಳ್ತಂಗಡಿ ತಾಲೂಕಿನ ಮೂಡುಬಿದಿರೆ ರೇಂಜ್‌ಗೆ ಒಳಪಟ್ಟ ನಾರಾವಿ ಕುತ್ಲೂರಿನಲ್ಲಿರುವ ಎರಡೂವರೆ ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಬೆಳೆಸುತ್ತಿರುವ 39 ಬಗೆಯ ನರ್ಸರಿ ಗಿಡಗಳನ್ನು ಅಭಿವೃದ್ಧಿ ಮಾಡಿರುವ ಬಗ್ಗೆ ಮಾಹಿತಿಯನ್ನು ನೀಡಿದರು. ಕಳೆದ ವರ್ಷ ಶಿರ್ತಾಡಿ-ಹೊಸ್ಮಾರು ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮಾಡುವ ಸಂದಭರ್ದಲ್ಲಿ ಮರಗಳನ್ನು ತೆಗೆಯಲಾಗಿದ್ದು, ಇದೀಗ ಮತ್ತೆ ಮರವೊಂದಕ್ಕೆ 5ರಂತೆ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಲಾಗಿದೆ. ದರಗುಡ್ಡೆ-ವಾಲ್ಪಾಡಿ ಮೀಸಲು ಅರಣ್ಯ ಪ್ರದೇಶದ ಭಾಗದಲ್ಲಿರುವ ರೈತರಿಗೆ ಕೃಷಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯ ಜಾಗದಲ್ಲಿರುವ ಮೂರು ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡುವ ಮೂಲಕ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಹಾಗೂ ಇದೇ ಪ್ರದೇಶದಲ್ಲಿ ಕಾಂಪಾ ಯೋಜನೆಯಡಿ 10 ಹೆಕ್ಟೆರ್ ಪ್ರದೇಶದಲ್ಲಿ ನಿರ್ಮಿಸಿರುವ ನೆಡುತೋಪುಗಳ ಸಹಿತ ಇತರ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ವೀಕ್ಷಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಅರಣ್ಯ ಇಲಾಖೆಯ ಮೂಡುಬಿದಿರೆ ರೇಂಜ್‌ನ ವತಿಯಿಂದ ತನ್ನ ಕ್ಷೇತ್ರಕ್ಕೆ ಬರುವ ಅರಣ್ಯ ಪ್ರದೇಶದಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ್ದೇನೆ. ಕುತ್ಲೂರು ನರ್ಸರಿಯಲ್ಲಿ ಪಕ್ಷಿಗಳಿಗೆ ಆಹಾರವಾಗುವಂತಹ ಮಾವು, ಹಲಸು, ಕೋಕಮ್ (ಪುನರ್‌ಪುಳಿ) ಸಹಿತ ಇತರ ಗಿಡಗಳನ್ನು ಬೆಳೆಸಿರುವ ಬಗ್ಗೆ ಪ್ರಶಂಸಿದ ಅವರು, ಮೂಡುಬಿದಿರೆಯ ಕಡಲಕೆರೆ ಪ್ರದೇಶದಲ್ಲಿಯೂ ಅರಣ್ಯ ಇಲಾಖೆಯ ವತಿಯಿಂದ ಹೆಚ್ಚಿನ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಜಿ.ಡಿ ದಿನೇಶ್ ಅವರು ಅರಣ್ಯ ಇಲಾಖೆಯ ವತಿಯಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೂಲಂಕಷವಾಗಿ ಮಾಹಿತಿ ನೀಡಿದರು. ಶಿರ್ತಾಡಿ ಉಪ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ., ಮೂಡುಬಿದಿರೆ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್, ಪ್ರಕಾಶ್ ಶೆಟ್ಟಿ, ಹೊಸ್ಮಾರಿನ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಬಜಗೋಳಿ ವಿಭಾಗದ ಪ್ರಮೋದ್ ಹಾಗೂ ಅರಣ್ಯ ರಕ್ಷಕರು, ಸಿಬ್ಬಂದಿ ಈ ಸಂದಭರ್ದಲ್ಲಿ ಉಪಸ್ಥಿತರಿದ್ದರು.

Write A Comment