ಕರ್ನಾಟಕ

ನನಸಾದ ವಿಷ್ಣು ಸ್ಮಾರಕದ ಕನಸು : ಗೆಳೆಯನ ನೆನೆದು ಕಣ್ಣೀರಿಟ್ಟ ಅಂಬಿ

Pinterest LinkedIn Tumblr

cm15

ಬೆಂಗಳೂರು,ಡಿ.30: ಸತತ ಐದು ವರ್ಷಗಳ ಹಗ್ಗಜಗ್ಗಾಟ, ಅಡೆತಡೆಗಳ ನಡುವೆಯು ವಿಷ್ಣು ಸ್ಮಾರಕಕ್ಕೆ ಚಾಲನೆ ದೊರೆತ್ತಿರುವುದು ಅತೀವ ಸಂತಸ ತಂದಿದೆ ಮತ್ತು ಅಭಿಮಾನಿಗಳ ಕನಸು ನನಸಾಗುವ ಸಮಯ ಒದಗಿ ಬಂದಿದೆ ಎಂದು ಭಾರತಿ ವಿಷ್ಣವರ್ಧನ್ ಹೇಳಿದರು.

ವಿಪರ್ಯಾಸ ಎಂಬಂತೆ ವಿಷ್ಣುವರ್ಧನ್ ಅವರ ನಿಧನದ ನಂತರ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕಾಮಗಾರಿ ಆರಂಭಿಸದೇ ನೆನೆಗುದಿಗೆ ಬಿದ್ದಿತ್ತು. ಈಗ ಒಂದು ವರ್ಷದ ಕಾಲಾವಧಿಯಲ್ಲಿ ಸ್ಮಾರಕದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಭಾರತಿ ತಿಳಿಸಿದರು. ಶಿಲ್ಯಾನ್ಯಾಸಕ್ಕೂ ಮುನ್ನ ಈ ಸಂಜೆ ಜೊತೆ ಮಾತನಾಡಿದ ಭಾರತಿಯವರು, ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರ ಉಸ್ತುವಾರಿಯಲ್ಲಿ ಇದುವರೆಗೆ ಇದ್ದ ಎಲ್ಲಾ ಗೊಂದಲಗಳು ನಿವಾರಣೆಯಾಗಿ ಸ್ಮಾರಕದ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ. ಇನ್ನು ಮುಂದೆಯೇ ಇದು ಸುಗಮವಾಗಿ ನಡೆದು ಆದಷ್ಟು ಬೇಗ ಅಭಿಮಾನಿಗಳ ಬಹುದಿನಗಳ ಕನಸು ಸಾಕಾರಗೊಳ್ಳಲ್ಲಿ ಎಂದು ಆಶಿಸಿದರು.

cm17

cm14

ಪ್ರಸ್ತುತ ಸರ್ಕಾರ ಮಂಜೂರು ಮಾಡಿರುವ ಎರಡು ಎಕರೆ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದ್ದು, ಕಟ್ಟಡ ಮಹಡಿಯನ್ನು ಹೊಂದಿರುತ್ತದೆ. ನೆಲಮಹಡಿಯನ್ನು ವಾಣಿಜ್ಯ ಬಳಕೆಗೆ ಬಳಸಿಕೊಂಡರೆ ಮೇಲಿನ ಮಹಡಿಯಲ್ಲಿ ವಿಷ್ಣುವರ್ಧನ್ ಅವರ ವಿವಿಧ ಸಿನಿಮಾಗಳ ಚಿತ್ರ, ಕಲಾಕೃತಿಗಳು ಹಾಗೂ ಅವರ ಜೀವನಕ್ಕೆ ಸಂಬಂಧಪಟ್ಟ ಕಲಾಕೃತಿಗಳನ್ನು ಜೋಡಿಸಿ ಒಂದು ಗ್ಯಾಲರಿಯನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಎರಡು ಎಕರೆ ಪ್ರದೇಶವನ್ನು ಕೊಟ್ಟಿದ್ದು, ಇದಕ್ಕೆ ಹೊಂದಿಕೊಂಡಿರುವ ಇನ್ನು ಮೂರು ಎಕರೆ ಪ್ರದೇಶವನ್ನು ಮಂಜೂರು ಮಾಡಿದರೆ ಅಲ್ಲಿ ಒಂದು ನಟನೆ, ಗಾಯನ, ನಿರ್ದೇಶನಗಳ ತರಬೇತಿ ಸಂಸ್ಥೆಯೊಂದನ್ನು ಆರಂಭಿಸುವ ಉದ್ದೇಶವಿದೆ. ಸರ್ಕಾರ ಜಮೀನು ನೀಡಿದರೆ ಚಿತ್ರರಂಗಕ್ಕೆ ಅಗತ್ಯವಾದ ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಸಮಾರಂಭದಲ್ಲಿ ವಿಷ್ಣುವರ್ಧನ್ ಕುರಿತಾದ ಕಾಮಿಕ್ಸ್ ಪುಸ್ತಕದ 2ನೇ ಭಾಗವನ್ನು ಲೋಕಾರ್ಪಣೆ ಮಾಡಲಾಯಿತು. 1ನೇ ಭಾಗ ಈ ಮೊದಲೇ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಕಾಮಿಕ್ಸ್ ಪುಸ್ತಕವನ್ನು ವಿನೂತ ಪರಿಕಲ್ಪನೆಯೊಂದಿಗೆ ವಿಷ್ಣುವರ್ಧನ್ ಮೊಮ್ಮಕ್ಕಳಾದ ಜೇಷ್ಠ ಮತ್ತು ಶ್ಲೋಕ ಅವರು ತಯಾರಿಸಿದ್ದು, ಅವರಿಗೆ ಅಪ್ಪ ಅನಿರುದ್ಧ ಮತ್ತು ಅಮ್ಮ ಕೀರ್ತಿ ನೆರವು ನೀಡಿದ್ದಾರೆ.

cm13

cm12

ವಿವಿಧ ಕಾರ್ಯಕ್ರಮಗಳು: ತಮ್ಮ ವಿಶಿಷ್ಟ ನಟನೆಯಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಟ ವಿಷ್ಣುವರ್ಧನ್ ಅವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಈ ಸಂದರ್ಭ ಉಚಿತ ನೇತ್ರ ಚಿಕಿತ್ಸೆ, ರಕ್ತದಾನ, ಅಂಗಾಂಗ ದಾನಗಳ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರಗಳ ಆಯೋಜನೆಗೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳು, ರೋಟರಿ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳು ಕೈ ಜೋಡಿಸಿದ್ದು ವಿಶೇಷವಾಗಿತ್ತು.

ವ್ಯವಸ್ಥೆ ವಿರುದ್ಧ ಸಿಡಿದೇಳುತ್ತಿದ್ದ ವಿಷ್ಣು: ಮುಖ್ಯಮಂತ್ರಿ ಬಣ್ಣನೆ

ಕೆಂಗೇರಿ/ಬೆಂಗಳೂರು: ಕರ್ನಾಟಕದಾದ್ಯಂತ ಸಾಹಸ ಸಿಂಹ ಎಂದೇ ಖ್ಯಾತರಾಗಿದ್ದ ಡಾ.ವಿಷ್ಣವರ್ಧನ್ ಬರೀ ನಟನಷ್ಟೇ ಅಲ್ಲದೆ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸಾಹಸ ಪ್ರವೃತ್ತಿಯನ್ನೂ ಹೊಂದಿದ್ದ ಅಪರೂಪದ ನಟ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದ ಹೊರವಲಯದ ಕೆಂಗೇರಿ ಬಳಿಯ ಮೈಲಸಂದ್ರ ಗ್ರಾಮದಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಕನ್ನಡದ ಶ್ರೇಷ್ಠ ನಟ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

cm6

cm1

cm

ವಿಷ್ಣುವರ್ಧನ್ ಅವರು ವೈಯಕ್ತಿಕವಾಗಿ ನನ್ನ ಗೆಳೆಯರಾಗಿದ್ದವರು. ಸ್ನೇಹ ಜೀವಿ. ದೊಡ್ಡವರೊಂದಿಗೆ ಚಿಕ್ಕವರಾಗಿ, ಚಿಕ್ಕವರೊಂದಿಗೆ ದೊಡ್ಡವರಾಗಿ ನಡೆದುಕೊಳ್ಳುವ ವಿಶೇಷ ಗುಣ ಅವರ ವ್ಯಕ್ತಿತ್ವಕ್ಕೆ ಘನತೆಯನ್ನು ತಂದುಕೊಟ್ಟಿತ್ತು ಎಂದು ಸಿದ್ದರಾಮಯ್ಯ ವಿಷ್ಣುವರ್ಧನ್ ಮತ್ತು ತಮ್ಮ ನಡುವಿನ ಒಡನಾಟವನ್ನು ಮೆಲುಕು ಹಾಕಿದರು.

ವಿಷ್ಣುವರ್ಧನ್ ಸೇವಾ ಮನೋಭಾವ ಹೊಂದಿದ್ದರು. ದಾನಿಯಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ ವಿಶಿಷ್ಟ ಕಲಾವಿದನಾಗಿದ್ದರು. ವಿಷ್ಣುವರ್ಧನ್ ಈ ನಾಡು ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶೋಧ. ನಾಗರಹಾವು ಮೂಲಕ ರಾಮಚಾರಿಯಾಗಿ ಚಿತ್ರರಂಗ ಪ್ರವೇಶಿಸಿದ ವಿಷ್ಣುವರ್ಧನ್ ಸಾಹಸ ಸಿಂಹ ಎಂಬ ಬಿರುದಿಗೆ ಅನ್ವರ್ಥವಾಗಿದ್ದರು ಎಂದು ವಿಷ್ಣುವರ್ಧನ್ ಅವರ ಗುಣಗಾನ ಮಾಡಿದರು.

ಆಪ್ತ ಮಿತ್ರನಿಗೆ ಕಣ್ಣೀರ ಅಭಿಷೇಕ

ವಿಷ್ಣುವರ್ಧನ್ ಸ್ಮಾರಕ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪತ್ನಿ ಸುಮಲತಾ ಅವರೊಂದಿಗೆ ಸ್ವಲ್ಪ ತಡವಾಗಿ ಆಗಮಿಸಿದ ವಿಷ್ಣು ಅವರ ಕುಚುಕು ಗೆಳೆಯ, ವಸತಿ ಸಚಿವ ನಟ ಅಂಬರೀಶ್ ತನ್ನ ಗೆಳೆಯನನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದಂತೆ ಅಂಬರೀಶ್ ಅವರು ಗೆಳೆಯನನ್ನು ನೆನಪು ಮಾಡಿಕೊಂಡು ಗಳಗಳನೆ ಅತ್ತರು. ಜೊತೆಯಲ್ಲಿದ್ದ ತಾರಾ ಪತ್ನಿ ಸುಮಲತಾ ಮತ್ತು ಇತರರು ಅಂಬರೀಶ್ ಅವರನ್ನು ಸಮಾಧಾನಪಡಿಸಿದರು. ನಂತರ ಅಂಬರೀಶ್ ಕಣ್ಣೊರೆಸಿಕೊಳ್ಳುತ್ತಲೇ ವೇದಿಕೆಯತ್ತ ನಡೆದರು. ಕನ್ನಡ ಚಿತ್ರೋದ್ಯಮದ ನಿರ್ಮಾಪಕರು, ನಿರ್ದೇಶಕರು, ವಾಣಿಜ್ಯ ಮಂಡಳಿ ಅಧ್ಯಕ್ಷರೂ ಸೇರಿದಂತೆ ಕೆಲವರನ್ನು ಹೊರತುಪಡಿಸಿದರೆ ಇತರ ಯಾವುದೇ ನಟನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ , ಶಾಸಕ ಸೋಮಶೇಖರ್, ಸ್ಮಾರಕ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿಕೊಂಡಿರುವ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ಮತ್ತು ಅಳಿಯ ಅನಿರುದ್ಧ್ , ಮೊಮ್ಮಕ್ಕಳಾದ ಜೇಷ್ಠ ಮತ್ತು ಶ್ಲೋಕ , ಪಾಲಿಕೆಯ ಕೆಲ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Write A Comment