ಮಂಗಳೂರು,ಡಿ.30: ಸಹಕಾರ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳ ಜೊತೆಗೆ ಹೊಸ ತಂತ್ರಜ್ಞಾನದ ಅಳವಡಿಕೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ಸಿಡಿಸಿಸಿ ಬ್ಯಾಂಕ್) ದೇಶದ ಸಹಕಾರಿ ಕ್ಷೇತ್ರದ ಬ್ಯಾಂಕುಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಸರಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಂದ್ರ ಜೈನ್ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಎಸ್ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಛೇರಿಗೆ ಭೇಟಿ ನೀಡಿ ಬ್ಯಾಂಕಿನ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ ಮಾತನಾಡಿದರು. ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ದಕ್ಷ ನಾಯಕತ್ವದಲ್ಲಿ ಈ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಠೇವಣಿ ಸಂಗ್ರಹಣೆ, ಸಾಲವಸೂಲಾತಿಯಲ್ಲಿ ವಿಶಿಷ್ಠ ಸಾಧನೆಗೈದಿರುವ ಎಸ್ಸಿಡಿಸಿಸಿ ಬ್ಯಾಂಕ್ ರೈತರಿಗೆ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಗ್ರಾಹಕರಿಗೆ ರುಪೇ ಡೆಬಿಟ್ ಕಾರ್ಡ್ಗಳನ್ನು ವಿತರಿಸಿ ದೇಶದ ಗಮನವನ್ನು ಸೆಳೆದಿದೆ. ಸ್ವಸಹಾಯ ಗುಂಪುಗಳ ಕಾರ್ಯನಿರ್ವಹಣೆಯಲ್ಲಿ ಹಾಗೂ ಸಂಘಟನೆಯಲ್ಲಿ ಗಣನೀಯ ಪ್ರಗತಿಯನ್ನು ಎಸ್ಸಿಡಿಸಿಸಿ ಬ್ಯಾಂಕ್ ಕಂಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರದ ಎಲ್ಲಾ ಯೋಜನೆಗಳು ಮಧ್ಯವರ್ತಿಗಳ ಕೈಸೇರದೆ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವುದು ಪ್ರಶಂಸನೀಯ. ತನ್ನ ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಿ ತ್ವರಿತ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತಾಪಿ ವರ್ಗದ ಹಾಗೂ ತನ್ನ ಗ್ರಾಹಕರ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಶಕ್ತಿಯುತ ಬ್ಯಾಂಕಾಗಿ ಎಸ್ಸಿಡಿಸಿಸಿ ಬ್ಯಾಂಕ್ ರೂಪುಗೊಂಡಿದೆ. ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಶೀಘ್ರವಾಗಿ ಎಟಿಎಂ ಅಳವಡಿಸಿಕೊಳ್ಳುವಂತೆ ಅವರು ಸೂಚಿಸಿದರು.
ಶತಮಾನೋತ್ಸವದ ಹೊಸ್ತಿಲಲ್ಲಿರುವ ಎಸ್ಸಿಡಿಸಿಸಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಗುರುತಿಸಿ ಸಹಕಾರ ಕ್ಷೇತ್ರದಲ್ಲಿ ಅಗ್ರಮಾನ್ಯ ಬ್ಯಾಂಕ್ ಎನಿಸಿಕೊಳ್ಳಲಿ ಎಂದು ಅವರು ಈ ಸಂದರ್ಭದಲ್ಲಿ ಶುಭಕೋರಿದರು. ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು ಬ್ಯಾಂಕಿನ ಪ್ರಗತಿಯ ವಿವರವನ್ನು ನೀಡಿ ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಂದ್ರ ಜೈನ್ ಅವರನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಬಿ.ಕೆ.ಸಲೀಂ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಜಿ.ಬಾಬು ಬಿಲ್ಲವ, ಕೆಎಂಎಫ್ನ ವ್ಯವಸ್ಥಾಪನಾ ನಿರ್ದೇಶಕರಾದ ಡಾ|ಸತ್ಯನಾರಾಯಣ, ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರಾದ ದೇವೇಂದ್ರಪ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ರಾಜು, ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಶ್ರೀ ಪ್ರವೀಣ್ ನಾಯಕ್, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಶ್ರೀನಿವಾಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು