ಚೆನ್ನೈ, ಡಿ.30: ರೈಲ್ವೇಸ್ ಬ್ಯಾಟ್ಸ್ಮನ್ ರೋಹನ್ ಬೋಂಸ್ಲೆ ರಣಜಿ ಟ್ರೋಫಿ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಕುತ್ತಿಗೆಯ ಹಿಂಭಾಗಕ್ಕೆ ಚೆಂಡು ಬಡಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.
ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೂರನೆ ದಿನದಾಟದಲ್ಲಿ ಚೆನ್ನೈನ ಬ್ಯಾಟ್ಸ್ಮನ್ ಆರ್. ಸತೀಶ್, ಸ್ಪಿನ್ನರ್ ಆಶೀಶ್ ಯಾದವ್ ಎಸೆದ ಚೆಂಡನ್ನು ಬಲವಾಗಿ ಬೀಸಿದರು.
ಫಾರ್ವರ್ಡ್ ಲೆಗ್ನಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಬೋಂಸ್ಲೆ ಚೆಂಡಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಹಿಂದಿರುಗಿದಾಗ ಚೆಂಡು ಅವರ ಕುತ್ತಿಗೆಯ ಹಿಂಭಾಗಕ್ಕೆ ಅಪ್ಪಳಿಸಿತು. ಬೋಂಸ್ಲೆ ಅವರನ್ನು ಸ್ಟ್ರಚರ್ನ ಮೂಲಕ ಮೈದಾನದಿಂದ ಹೊರ ಕೊಂಡೊಯ್ದು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘‘ರೋಹನ್ ಗಂಭೀರ ಗಾಯದಿಂದ ಪಾರಾಗಿದ್ದಾರೆ. ಎಲ್ಲ ಸ್ಕಾನಿಂಗ್ ವರದಿ ಚೆನ್ನಾಗಿದೆ. ಚಿಂತಿಸುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಒಂದು ರಾತ್ರಿ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಬೆಳಗ್ಗೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವರು’’ ಎಂದು ರೈಲ್ವೇಸ್ನ ಬ್ಯಾಟಿಂಗ್ ಕೋಚ್ ಸೈಯದ್ ಝಕಾರಿಯಾ ಹೇಳಿದ್ದಾರೆ. ಬೋಂಸ್ಲೆ ರಣಜಿ ಟ್ರೋಫಿಯ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ.