ಪಾಂಡವಪುರ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿರುವ ಎಡಬೆಟ್ಟದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 8 ವರ್ಷದ ಹೆಣ್ಣು ಚಿರತೆ ಬುಧವಾರ ಬಿದ್ದಿದೆ.
ಎಡಬೆಟ್ಟದ ತಪ್ಪಲಿನ ಪೊದೆಯಲ್ಲಿ ಬೋನು ಇರಿಸಿ ನಾಯಿಯನ್ನು ಕಟ್ಟಿದ್ದರು. ಮಂಗಳವಾರ ರಾತ್ರಿ ಆಹಾರ ಹುಡುಕಿಕೊಂಡು ಬಂದ ಚಿರತೆಯು ಸೆರೆಸಿಕ್ಕಿತು. ಈ ಹಿಂದೆ ಹಲವಾರು ಬಾರಿ ಬೋನು ಇಟ್ಟು ಪ್ರಯತ್ನಿಸಿದ್ದರೂ ಸಫಲವಾಗಿರಲಿಲ್ಲ.
ಚಿರತೆಯ ಹಾವಳಿ ಮತ್ತಷ್ಟು ಹೆಚ್ಚಿದ್ದರಿಂದ ಗ್ರಾಮದ ಜನತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಚಿರತೆಯನ್ನು ಬಂಡೀಪುರ ವನ್ಯಜೀವಿ ವಿಭಾಗದ ಅರಣ್ಯವಲಯದ ಮೂಲೆಹೊಳೆ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.
………………………………….
ಚಿರತೆ ದಾಳಿಗೆ ಇಬ್ಬರು ಬಲಿ
ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿ ತ್ಯಾವನಹಳ್ಳಿ ಗ್ರಾಮದ ತೋಟದಲ್ಲಿ ನೀರು ಹಾಯಿಸು ತ್ತಿದ್ದ ತಾತ ಮತ್ತು ಮೊಮ್ಮಗನನ್ನು ಚಿರತೆ ಬಲಿ ತೆಗೆದು ಕೊಂಡಿರುವ ಘಟನೆ ಜ.6ರ ಮಧ್ಯರಾತ್ರಿ ನಡೆದಿದೆ.
ಕೋಲಾರದ ಶತಶೃಂಗ ಪರ್ವತ ಶ್ರೇಣಿ ಚಿರತೆಗಳ ತಾಣವಾಗಿದ್ದು, ಹಲವಾರು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆಸಿರುವುದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಇದೇ ಮೊದಲ ಬಾರಿಗೆ ಅವು ನರಬಲಿ ತೆಗೆದುಕೊಂಡಿವೆ.
ತ್ಯಾವನಹಳ್ಳಿ ಗ್ರಾಮದ ವಾಸಿ ವೆಂಕಟಪ್ಪ(55) ಎಂಬವರು ಮಂಗಳವಾರ ರಾತ್ರಿ ತನ್ನ ಮೊಮ್ಮಗ ಮಹೇಶ್(15) ಎಂಬವರೊಂದಿಗೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಚಿರತೆ ದಾಳಿ ನಡೆಸಿದೆ ಎಂದು ವಲಯ ಅರಣ್ಯಾಕಾರಿ ಜಗದೀಶ್ ತಿಳಿಸಿದ್ದಾರೆ.
ಮಹೇಶ ಮೂಲತಃ ಮಾಲೂರಿನ ಕೊಮ್ಮನಹಳ್ಳಿ ವಾಸಿಯಾಗಿದ್ದು, ತ್ಯಾವನಹಳ್ಳಿಯ ತಾತನ ಮನೆಯಲ್ಲಿದ್ದು 10ನೆ ತರಗತಿ ಓದುತ್ತಿದ್ದನ್ನಲಾಗಿದೆ, ಶಾಸಕ ವರ್ತೂರು ಪ್ರಕಾಶ್ ಗ್ರಾಮಕ್ಕೆ ಧಾವಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಹಿಂದಿನ ಜಿಲ್ಲಾಕಾರಿ ಡಿ.ಕೆ. ರವಿ ಸ್ಥಗಿತಗೊಳಿಸಿದ್ದ ಬಂದೂಕು ನವೀಕರಣವನ್ನು, ಇಂದಿನ ಜಿಲ್ಲಾಕಾರಿ ಡಾ.ತ್ರಿಲೋಕ್ಚಂದ್ರ ಚಾಲನೆ ನೀಡಿ ರೈತರ ಪ್ರಾಣಗಳನ್ನು ಉಳಿಸುವ ಕೆಲಸವನ್ನು ತುರ್ತಾಗಿ ಮಾಡುವ ಅನಿವಾರ್ಯವಿದೆಯೆಂದು ಅಭಿಪ್ರಾಯಪಟ್ಟರು.
ಈ ಭಾಗದಲ್ಲಿ ಚಿರತೆ ಹಾವಳಿಯಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು, ಅರಣ್ಯ ಇಲಾಖೆಯವರು ಚಿರತೆ ಹಿಡಿಯುವುದಕ್ಕೆ ಮುಂದಾಗಬೇಕಿತ್ತು. ಆದರೆ, ಇಲಾಖೆಯವರು ಈ ಕೆಲಸ ಮಾಡಲಿಲ್ಲ. ಇನ್ನಾದರೂ ಚಿರತೆಗಳನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವಂತೆ ಅವರು ಅಕಾರಿಗಳಿಗೆ ಸೂಚಿಸಿದರು. ಅರಣ್ಯಾಕಾರಿಗಳು ಚಿರತೆ ದಾಳಿಯಿಂದ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಪ್ರಕಾಶ್ ಸಲಹೆ ನೀಡಿದರು.
ಜಿಲ್ಲಾಕಾರಿ ಡಾ.ತ್ರಿಲೋಕ್ಚಂದ್ರ,ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಜಯ್ಹಿಲೋರಿ, ತಹಸೀಲ್ದಾರ್ ರಂಗೇಗೌಡ, ಗ್ರಾಪಂ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ಬೆಗ್ಲಿ ಪ್ರಕಾಶ್, ವರದೇನಹಳ್ಳಿ ವೆಂಕಟೇಶ್, ತ್ಯಾಗರಾಜ್ ಮುದ್ದಪ್ಪ, ಅಪ್ಪಿ ನಾರಾಯಣಸ್ವಾಮಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ದೈರ್ಯ ತುಂಬಿದರು.