ಮನೋರಂಜನೆ

ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌: ಆಸ್ಟ್ರೇಲಿಯದ ದೊಡ್ಡ ಮೊತ್ತ: ಭಾರತದ ಉತ್ತಮ ಆರಂಭ

Pinterest LinkedIn Tumblr

rohith-shrama

ಸಿಡ್ನಿ, ಜ.7: ಇಲ್ಲಿ ನಡೆಯುತ್ತಿರುವ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡ ನಾಯಕ ಸ್ಟೀವನ್ ಸ್ಮಿತ್ ಬಾರಿಸಿದ ಸರಣಿಯ ನಾಲ್ಕನೆ ಶತಕದ ನೆರವಿನಲ್ಲಿ ಭಾರತದ ವಿರುದ್ಧ ಮತ್ತೆ ಮೇಲುಗೈ ಸಾಧಿಸಿದೆ.

ಟೆಸ್ಟ್‌ನ ಎರಡನೆ ದಿನವಾಗಿರುವ ಬುಧವಾರ ಆಟ ನಿಂತಾಗ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 572 ರನ್‌ಗಳಿಗೆ ಉತ್ತರವಾಗಿ ಭಾರತ 25 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 71 ರನ್ ಗಳಿಸಿದೆ. ಆರಂಭಿಕ ದಾಂಡಿಗ ಕರ್ನಾಟಕದ ಲೋಕೇಶ್ ರಾಹುಲ್ ಔಟಾಗದೆ 31 ಮತ್ತು ಆರಂಭಿಕ ಸ್ಥಾನಕ್ಕೆ ಭಡ್ತಿ ಪಡೆದ ರೋಹಿತ್ ಶರ್ಮ ಔಟಾಗದೆ 40 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಮುರಳಿ ವಿಜಯ್ ಖಾತೆ ತೆರೆಯದೆ ನಿರ್ಗಮಿಸಿದ್ದರು. ಕಳೆದ ಟೆಸ್ಟ್‌ನಲ್ಲಿ ರೋಹಿತ್ ಶರ್ಮ ಸ್ಥಾನಕ್ಕೆ ಅವಕಾಶ ಗಿಟ್ಟಿಸಿಕೊಂಡು ಚೊಚ್ಚಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲೂ ವೈಫಲ್ಯ ಅನುಭವಿಸಿದ್ದ ಕರ್ನಾಟಕದ ಅಗ್ರಸರದಿಯ ಯುವ ದಾಂಡಿಗ ರಾಹುಲ್‌ಗೆ ಅಂತಿಮ ಟೆಸ್ಟ್‌ನಲ್ಲಿ ಇನ್ನೊಂದು ಅವಕಾಶ ನೀಡಲಾಗಿತ್ತು. ರಾಹುಲ್ ಅವರು ಶಿಖರ್ ಧವನ್ ಸ್ಥಾನದಲ್ಲಿ ಮತ್ತು ರೋಹಿತ್ ಶರ್ಮ ಅವರು ಚೇತೇಶ್ವರ ಪೂಜಾರ ಬದಲಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ರಾಹುಲ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 71 ರನ್‌ಗಳನ್ನು ಕಲೆ ಹಾಕಿದ್ದಾರೆ. ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಡುವ ನಿಟ್ಟಿನಲ್ಲಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದ್ದಾರೆ.

ಆಸ್ಟ್ರೇಲಿಯ 572 /7 ಡಿಕ್ಲೇರ್: ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆಸ್ಟ್‌ನ ಎರಡನೆ ದಿನ ಎಲ್ಲರ ದೃಷ್ಟಿ ಆಸ್ಟ್ರೇಲಿಯದ ನಾಯಕ ಸ್ಮಿತ್ ಕಡೆಗೆ ನೆಟ್ಟಿತ್ತು. ಸ್ಮಿತ್ ಶತಕದ ಸಹಾಯದಿಂದ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 152.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 572 ರನ್ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 348 ರನ್ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ 224 ರನ್ ಸೇರಿಸಿತು. 82 ರನ್ ಗಳಿಸಿ ಅಜೇಯರಾಗಿ ಕ್ರೀಸ್‌ನಲ್ಲಿದ್ದ ಸ್ಟೀವನ್ ಸ್ಮಿತ್ ಮತ್ತು 61 ರನ್ ಗಳಿಸಿದ್ದ ಶೇನ್ ವ್ಯಾಟ್ಸನ್ ಆಟ ಮುಂದುವರಿಸಿ ತಂಡದ ಸ್ಕೋರ್‌ನ್ನು 107.2 ಓವರ್‌ಗಳಲ್ಲಿ 400ಕ್ಕೆ ತಲುಪಿಸಿದರು.

ಭಾರತದ ಪರ 112ಕ್ಕೆ ಐದು ವಿಕೆಟ್ ಉಡಾಯಿಸಿದ್ದ ಮುಹಮ್ಮದ್ ಶಮಿ 108ನೆ ಓವರ್‌ನ ಎರಡನೆ ಎಸೆತದಲ್ಲಿ ವ್ಯಾಟ್ಸನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಸ್ಮಿತ್ ಮತ್ತು ವ್ಯಾಟ್ಸನ್ 196 ರನ್‌ಗಳ ಜೊತೆಯಾಟ ನೀಡಿದರು. ವ್ಯಾಟ್ಸನ್ 81 ರನ್(253ನಿ, 183ಎ, 7ಬೌ) ಗಳಿಸಿ ಪೆವಿಲಿಯನ್ ಸೇರಿದರು. ನಾಲ್ಕನೆ ವಿಕೆಟ್‌ಗೆ ಸ್ಮಿತ್‌ಗೆ ಶಾನ್ ಮಾರ್ಷ್ ಜೊತೆಯಾದರು. ಸ್ಮಿತ್ ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಭಾರತದ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದರು. 26ನೆ ಟೆಸ್ಟ್ ಆಡುತ್ತಿರುವ ಸ್ಮಿತ್ ಟೆಸ್ಟ್‌ನಲ್ಲಿ 8ನೆ ಶತಕ ದಾಖಲಿಸಿದರು. 268 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಸ್ಮಿತ್ 208 ಎಸೆತಗಳನ್ನು ಉತ್ತರಿಸಿ 15 ಬೌಂಡರಿಗಳ ಸಹಾಯದಿಂದ 117 ರನ್ ಸೇರಿಸಿ ಉಮೇಶ್ ಯಾದವ್ ಎಸೆತದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಕ್ಯಾಚ್ ನೀಡಿದರು.

ಸ್ಮಿತ್ ನಿರ್ಗಮನದ ಬಳಿಕ ಮಾರ್ಷ್ ಮತ್ತು ಬರ್ನ್ಸ್ ಜೊತೆಯಾಗಿ ಸೊಗಸಾದ ಇನಿಂಗ್ಸ್ ಕಟ್ಟಿದರು. ಐದನೆ ವಿಕೆಟ್‌ಗೆ 114 ರನ್ ಸೇರಿಸಿದರು. ಮಾರ್ಷ್ 73 ರನ್ ಗಳಿಸಿ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಬರ್ನ್ಸ್ ಅರ್ಧಶತಕ (58) ದಾಖಲಿಸಿದರು. ರಯಾನ್ ಹ್ಯಾರಿಸ್ 11 ನಿಮಿಷಗಳ ಬ್ಯಾಟಿಂಗ್‌ನಲ್ಲಿ 9 ಎಸೆತಗಳಲ್ಲಿ 5 ಬೌಂಡರಿಗಳಿರುವ 25 ರನ್ ಸೇರಿಸಿದರು. ಹ್ಯಾರಿಸ್ ಅವರು ಶಮಿ ಎಸೆತದಲ್ಲಿ ಅಶ್ವಿನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಬೆನ್ನ್ನಲ್ಲೆ ನಾಯಕ ಸ್ಮಿತ್ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ವಿಕೆಟ್ ಕೀಪರ್ ಬ್ರಾಡ್ ಹಡಿನ್ ಔಟಾಗದೆ 9 ರನ್ ಗಳಿಸಿದರು.

ಆಟದ ಎರಡನೆ ದಿನ ಮುಹಮ್ಮದ್ ಶಮಿ 112ಕ್ಕೆ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಆರ್.ಅಶ್ವಿನ್ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು. ಸರಣಿಯಲ್ಲಿ ಮೊದಲ ಬಾರಿ ಆಡುತ್ತಿರುವ ವೇಗಿ ಭುವನೇಶ್ವರ ಕುಮಾರ್ (34-5-122-0), ರೈನಾ(16-3-53-0) ಕೈ ಸುಟ್ಟುಕೊಂಡರು.

ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 152.3 ಓವರ್‌ಗಳಲ್ಲಿ 7 ವಿಕೆಟ್‌ಗೆ 572

ಕ್ರಿಸ್ ರೋಜರ್ಸ್‌ ಬಿ ಶಮಿ 95, ಡೇವಿಡ್ ವಾರ್ನರ್ ಸಿ ವಿಜಯ್ ಬಿ ಅಶ್ವಿನ್ 101, ಶೇನ್ ವ್ಯಾಟ್ಸನ್ ಸಿ ಅಶ್ವಿನ್ ಬಿ ಶಮಿ 81, ಸ್ಟೀವನ್ ಸ್ಮಿತ್ ಸಿ ಸಹಾ ಬಿ ಯಾದವ್ 117, ಶಾನ್ ಮಾರ್ಷ್ ಸಿ ರಾಹುಲ್ ಬಿ ಶಮಿ 73, ಜೋ ಬರ್ನ್ಸ್ ಸಿ ರಾಹುಲ್ ಬಿ ಶಮಿ 58, ಹಡಿನ್ ಔಟಾಗದೆ 9, ರಯಾನ್ ಹ್ಯಾರಿಸ್ ಸಿ ಅಶ್ವಿನ್ ಬಿ ಶಮಿ 25, ಇತರೆ 13.
ವಿಕೆಟ್ ಪತನ: 1-200, 2-204, 3-400, 4-415, 5-529, 6-546, 7-572.
ಬೌಲಿಂಗ್‌ವಿವರ:   ಭುವನೇಶ್ವರ ಕುಮಾರ್ 34-5-122-0, ಉಮೇಶ್‌ಯಾದವ್ 27-5-137-1, ಮುಹಮ್ಮದ್ ಶಮಿ 28.3-3-112-5, ಆರ್.ಅಶ್ವಿನ್ 47-8-142-1, ಸುರೇಶ್ ರೈನಾ 16-3-53-0.

ಭಾರತ ಮೊದಲ ಇನಿಂಗ್ಸ್ 25 ಓವರ್‌ಗಳಲ್ಲಿ 1 ವಿಕೆಟ್‌ಗೆ 71
ಮುರಳಿ ವಿಜಯ್ ಸಿ ಹಡಿನ್ ಬಿ ಸ್ಟಾರ್ಕ್ 0, ಕೆ.ಎಲ್ ರಾಹುಲ್ ಔಟಾಗದೆ 31, ರೋಹಿತ್ ಶರ್ಮ ಔಟಾಗದೆ 40, ಇತರೆ 0.
ವಿಕೆಟ್ ಪತನ: 1-0

ಬೌಲಿಂಗ್ ವಿವರ: ಸ್ಟಾರ್ಕ್ 6-2-17-1, ಹ್ಯಾರಿಸ್ 7-1-17-0, ಹೇಝ್ಲಾವುಡ್ 4-1-10-0, ನಥನ್ ಲಿನ್ 8-1-27-0.

Write A Comment