ಬೆಳಗಾವಿ: ವಿಷ ಬೆರೆತಿತ್ತು ಎನ್ನಲಾದ ನೀರು ಸೇವಿಸಿ 13 ಮಕ್ಕಳು ಅಸ್ವಸ್ಥರಾದ ಘಟನೆ ಹುಕ್ಕೇರಿ ತಾಲ್ಲೂಕಿನ ನರಸಿಂಗ ಪುರ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಬಾಲಕರ ವಸತಿನಿಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅಸ್ವಸ್ಥ ಮಕ್ಕಳಿಗೆ ತಕ್ಷಣವೇ ಯಮಕನ ಮರಡಿ ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ 11 ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ ಮತ್ತಿಬ್ಬರಿಗೆ ಯಮಕನ ಮರಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ.
‘ಮಂಗಳವಾರ ರಾತ್ರಿ ವಸತಿನಿಲಯದಲ್ಲಿ ಊಟದ ನಂತರ ಟ್ಯಾಂಕಿನಲ್ಲಿದ್ದ ನೀರು ಕುಡಿದೆವು. ತಕ್ಷಣವೇ ಹೊಟ್ಟೆ ನೋವು ಕಾಣಿಸಿಕೊಡು, ವಾಂತಿ ಮಾಡಿಕೊಂಡೆವು. ಟ್ಯಾಂಕ್ ಸಮೀಪ, ಹತ್ತಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕದ ಬಾಟಲಿ ಪತ್ತೆಯಾಗಿದೆ’ ಎಂದು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಹೇಳಿದ್ದಾರೆ.
‘ನೀರಿನ ಟ್ಯಾಂಕ್ ಸಮೀಪ ಸಿಕ್ಕ ಬಾಟಲಿ ಮೇಲೆ ಆರ್ಗನೋಫಾಸ್ಫರಸ್ ಪೆಸ್ಟಿಸೈಡ್ ಎಂದಿದೆ. ಆದರೆ, ವಿದ್ಯಾರ್ಥಿಗಳಲ್ಲಿ ವಿಷಪೂರಿತ ನೀರು ಸೇವಿಸಿದ ಲಕ್ಷಣಗಳು ಕಂಡುಬಂದಿಲ್ಲ. ಎಲ್ಲ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
‘ವಸತಿನಿಲಯದಲ್ಲಿ 65 ವಿದ್ಯಾರ್ಥಿಗಳಿದ್ದಾರೆ. ನರಸಿಂಗಪುರ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಗೆ ಹೋಗುವ ಐದು ಹಾಗೂ ಹುನೂರಮಸ್ತಿಹೋಳಿಯ ಸರ್ಕಾರಿ ಶಾಲೆಗೆ ಹೋಗುವ ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ’ ಎಂದು ಸಮಾಜ ಕಲ್ಯಾಣ ಅಧಿಕಾರಿ ಉಮಾ ಸಾಲಿಗೌಡರ ಹೇಳಿದ್ದಾರೆ.
ವಸತಿನಿಲಯದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಮಕ್ಕಳು ಸೇವಿಸಿದ ಆಹಾರ ಮತ್ತು ನೀರನ್ನು ಸಂಗ್ರಹಿ ಸಿದ್ದಾರೆ. ಇವೆರಡನ್ನೂ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.