ಕೊಪ್ಪಳ: ನಗರದ ಸಂಸ್ಥಾನ ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಸಾಲುಮರದ ತಿಮ್ಮಕ್ಕ ಬುಧವಾರ ಚಾಲನೆ ನೀಡಿ ಉತ್ಸವದ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಜತೆಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಇಲ್ಲಿನ ರಥೋತ್ಸವವನ್ನು ಉದ್ಘಾಟಿಸಿದ ಗೌರವಕ್ಕೆ ಪಾತ್ರರಾದರು.
ಮಠದ ಮುಂಭಾಗ ಸಂಜೆ 5.48ಕ್ಕೆ ತಿಮ್ಮಕ್ಕ ಧ್ವಜಾರೋಹಣ ಮಾಡಿದ ತಕ್ಷಣ ಲಕ್ಷಾಂತರ ಭಕ್ತರ ಜಯಘೋಷದ ನಡುವೆ ಗವಿಸಿದ್ದೇಶ್ವರ ಸ್ವಾಮಿಯ ರಥ ಮಠದ ಮುಂಭಾಗದ ಮೈದಾನದ ಪಾದಗಟ್ಟೆಯವರೆಗೆ ಸಾಗಿ ವಾಪಸಾಯಿತು. ಸುಮಾರು ಐದು ಲಕ್ಷ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಿಮ್ಮಕ್ಕ, ‘ಇಂಥ ಮಹಾ ಉತ್ಸವವನ್ನು ಎಲ್ಲಿಯೂ ಕಂಡಿಲ್ಲ. ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ. ಮಠಗಳು ಗಿಡಮರ ನೆಡುವ ಕಾಯಕದಲ್ಲಿ ಇನ್ನೂ ತೊಡಗಿಕೊಳ್ಳಲಿ. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.
ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಸಾಲು ಮರದ ತಿಮ್ಮಕ್ಕ ಅವರನ್ನು ಕರೆಸಿ ರಥೋತ್ಸವ ಉದ್ಘಾಟಿಸಿರುವುದು ಅರ್ಥಪೂರ್ಣ. ಇದರಿಂದ ತಾಯಿಯನ್ನು ಕರೆಸಿ ಧ್ವಜಾರೋಹಣ ಮಾಡಿದಂತಾಗಿದೆ’ ಎಂದು ಬಣ್ಣಿಸಿದರು.
ಉದ್ಘಾಟನೆಗೂ ಮುನ್ನ ತಿಮ್ಮಕ್ಕ ಅವರನ್ನು ಮಠದಿಂದ ಉದ್ಘಾಟನಾ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು.