ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಜಕ್ಕೂರು ಕೆರೆಗೆ ಕೊಳಚೆನೀರು ಸೇರುತ್ತಿರುವುರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ದುರ್ವಾಸನೆ ಹರಡುತ್ತಿದೆ. ಸಾವಿರಾರು ಮೀನುಗಳು ಸೇರಿದಂತೆ ಜಲಚರಗಳು ಸಾವನ್ನಪ್ಪುತ್ತಿವೆ.
ಯಲಹಂಕದ ಕಾಮಾಕ್ಷಮ್ಮ ಲೇಔಟ್, ಸುರಭಿ ಲೇಔಟ್, ಮಾರುತಿ ನಗರ, ಕೋಗಿಲು ಪ್ರದೇಶಗಳ ಅಪಾರ್ಟ್ಮೆಂಟ್ಗಳು ಹಾಗೂ ಕಾರ್ಖಾನೆಗಳಿಂದ ಹರಿದು ಬರುವ ವಿಷಯುಕ್ತ ಕೊಳಚೆನೀರು ಕೆರೆಗೆ ಸೇರುತ್ತಿರುವುದರಿಂದ ನೀರು ಮಲಿನವಾಗಿದೆ. ಇದರಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದು, ಸಾವಿರಾರು ಮೀನುಗಳು ಸೇರಿದಂತೆ ಜಲಚರಗಳು ಸಾವನ್ನಪ್ಪಿವೆ.
ಈ ಬಗ್ಗೆ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ಸುಮಾರು 164 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬಿಡಿಎ ಅಭಿವೃದ್ಧಿ ಪಡಿಸಿದ್ದು, ಬಹುತೇಕ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಆದರೆ, ಪಾದಚಾರಿ ರಸ್ತೆ ಅಭಿವೃದ್ಧಿ ಮತ್ತು ತಂತಿಬೇಲಿ ಅಳವಡಿಕೆ ಕಾರ್ಯದ ಜೊತೆಗೆ ಸೂಕ್ತಭದ್ರತೆ ಒದಗಿಸಿ, ನಿರ್ವಹಣೆ ಮಾಡಿಲ್ಲ. ದೊಡ್ಡಪ್ರಮಾಣದಲ್ಲಿ ಹಣವನ್ನು ಖರ್ಚುಮಾಡಿ, ಅಭಿವೃದ್ಧಿ ಕಾರ್ಯ ಕೈಗೊಂಡು ಸುಮಾರು 4 ವರ್ಷ ಕಳೆದರೂ ಸಾರ್ವಜನಿಕರ ಸೌಲಭ್ಯಕ್ಕೆ ಕೆರೆಯನ್ನು ಮುಕ್ತಗೊಳಿಸದಿದ್ದರೆ ಪ್ರಯೋಜನವೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
ಬಿಡಿಎ ವತಿಯಿಂದ ಕೆರೆಯ ಆವರಣದಲ್ಲಿ ನೂರಾರು ಸಸಿಗಳನ್ನು ನೆಡಲಾಗಿದೆ. ಕೆರೆಯ ಮಧ್ಯದಲ್ಲಿ 3 ದ್ವೀಪಗಳಿದ್ದು, ಅಲ್ಲಿಗೆ ಬೇರೆ ಕಡೆಯಿಂದ ವಿವಿಧ ಜಾತಿಯ ನೂರಾರು ಪಕ್ಷಿಗಳು ವಲಸೆ ಬಂದು ವಾಸ್ತವ್ಯ ಹೂಡಿರುವುದರಿಂದ ಕೆರೆಯ ಸೊಬಗು ಮತ್ತಷ್ಟು ಹೆಚ್ಚಿದೆ. ಆದರೆ, ಕೆರೆಯ ದಡದಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕವಿದ್ದರೂ ಸಂಪೂರ್ಣ ಶುದ್ಧೀಕರಣ ಕಾರ್ಯ ನಡೆಯುತ್ತಿಲ್ಲವಾದ್ದರಿಂದ ಕಳೆದ ಒಂದು ತಿಂಗಳಿಂದ ಕೆರೆಗೆ ವಿಷಯುಕ್ತ ಕೊಳಚೆನೀರು ಸೇರುತ್ತಿದೆ. ಹೀಗಾಗಿ, ಮೀನುಗಳು ಸಾವನ್ನಪ್ಪುತ್ತಿರುವುದರ ಜೊತೆಗೆ ಕೆರೆಯ ಸೌಂದರ್ಯವೇ ನಾಶವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಜೆ.ಎಚ್.ಮೋಹನ್ ದೂರಿದರು.
ಕೆರೆಯ ನಿರ್ವಹಣೆಯನ್ನು ಬಿಬಿಎಂಪಿ ಮಾಡಬೇಕಾಗಿದೆ. ಆದರೆ ಬಿಡಿಎ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸದ ಕಾರಣ, ಕೆರೆಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿವಹಿಸಿ, ಕೆರೆಗೆ ಸೇರುತ್ತಿರುವ ಕೊಳಚೆನೀರನ್ನು ಕೂಡಲೇ ತಡೆಗಟ್ಟಿ, ಬಾಕಿಯಿರುವ ಕೆಲಸಗಳನ್ನು ಪೂರ್ಣ ಗೊಳಿಸುವುದರ ಜೊತೆಗೆ ನಿರ್ವಹಣೆಗೆ ಒತ್ತುನೀಡಿ, ಸಾರ್ವಜನಿಕರ ಉಪಯೋಗಕ್ಕೆ ಕೆರೆಯನ್ನು ಮುಕ್ತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೆರೆಯ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕೆಂದು ಬರುತ್ತಾರೆ. ಈ ಪ್ರದೇಶದಲ್ಲಿ ಇತ್ತೀಚೆಗೆ ದುರ್ವಾಸನೆ ಬೀರುತ್ತಿರುವುದರ ಜೊತೆಗೆ ಬೇರೆ ಕಡೆಗಳಿಂದ ಮೋಜಿಗಾಗಿ ಬರುವ ಅಪರಿಚಿತರಿಗೆ ಈ ಸ್ಥಳವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಬೇಕಾಗಿದೆ ಎಂದು ಜಕ್ಕೂರು ನಿವಾಸಿ ಜೆ.ನರೇಂದ್ರ ದೂರಿದರು.
14.9 ಕೋಟಿ ವೆಚ್ಚ
ಬಿಡಿಎ ವತಿಯಿಂದ ₨14.9 ಕೋಟಿ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಆದೇಶವೂ ಆಗಿದ್ದು, ಈ ಪ್ರಕ್ರಿಯೆ ಮುಗಿದ ಕೂಡಲೇ ಬಿಬಿಎಂಪಿ ಕೆರೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲಿದೆ. ತ್ಯಾಜ್ಯನೀರು ಸಂಸ್ಕರಣಾ ಘಟಕವು ಸರಿಯಾಗಿ ಕಾರ್ಯನಿರ್ವಹಿಸಿದರೆ ಕೆರೆಗೆ ಕೊಳಚೆನೀರು ಸೇರಲು ಸಾಧ್ಯವಿಲ್ಲ. ಕೂಡಲೇ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಈಗಾಗಲೆ ತಿಳಿಸಿದ್ದೇನೆ.
– ಬಿ.ಜಯರಾಂ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಡಿಎ.
ಹೋರಾಟ ಅನಿವಾರ್ಯ
ಕೆರೆಗೆ ಕೊಳಚೆನೀರು ಸೇರುತ್ತಿರುವ ಪರಿಣಾಮ ಸುತ್ತಮುತ್ತಲ ಪ್ರದೇಶ-ಗಳಲ್ಲಿ ದುರ್ವಾಸನೆ ಹರಡುತ್ತಿದೆ. ಸಾವಿರಾರು ಮೀನುಗಳು ಸಾವನ್ನಪ್ಪಿರುವುದು ಬೇಸರ ತಂದಿದೆ. ಈ ಬಗ್ಗೆ ಈಗಾಗಲೇ ಬಿಡಿಎ ಮತ್ತು ಜಲಮಂಡಳಿ ಅಧಿಕಾರಿಗಳ ಗಮನ ಸೆಳೆಯಲಾಗಿದ್ದು, ಮತ್ತೊಮ್ಮೆ ತ್ಯಾಜ್ಯನೀರು ಸಂಸ್ಕರಣಾ ಘಟಕದ ಕಾರ್ಯವಿಧಾನವನ್ನು ಪರಿಶೀಲಿಸಿ, ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕೆಂದು ಕೋರಲಾಗುವುದು. ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ.
–ಕೆ.ಎ.ಮುನೀಂದ್ರಕುಮಾರ್, ಬಿಬಿಎಂಪಿ ಸದಸ್ಯ, ಜಕ್ಕೂರು ವಾರ್ಡ್