ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮೂರು ದಿನಗಳ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟ – 2014 -15, ಬುಧವಾರ ನಗರದ ಉರ್ವಾ ಮೈದಾನದಲ್ಲಿ ಆರಂಭಗೊಂಡಿತ್ತು.
ಹೋಟೆಲ್ ದೀಪಾ ಕಂಫರ್ಟ್ಸ್‌ನ ನಿರ್ದೇಶಕರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಹಾಗೂ ದೇವಗಿರಿ ಟೀ ಸಂಸ್ಥೆಯ ಮಾಲಕರು, ಚಾರ್ಟರ್ಡ್ ಅಕೌಂಟೆಂಟ್ ಶ್ರೀ ನಂದಗೋಪಾಲ್ ಶೆಣೈ ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅತಿಥಿಗಳು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕಬಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ನಂದಗೋಪಾಲ್ ಶೆಣೈ ಅವರು, ಕಬಡಿ ಪಂದ್ಯಾಟ ( ಮೇಕ್ ಇಂಡಿಯಾ ಕಾನ್ಸೆಪ್ಟ್) ಸ್ವದೇಶಿ ಆಟವಾಗಿದ್ದು, ಇಂದು ಹೆಚ್ಚಿನ ಬೆಳವಣಿಗೆ ಹಾಗೂ ಅವಕಾಶಗಳನ್ನು ಕಂಡಿವೆ. ಇಂದಿನ ಯುವ ಸಮೂಹ ಇಂತಹ ಅವಕಾಶಗಳನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಕಬಡಿ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡಿ ತಮ್ಮ ಪ್ರತಿಭೆಯನ್ನು ಈ ಮೂಲಕ ಬೆಳಕಿಗೆ ತರಬೇಕು ಎಂದು ಕರೆ ನೀಡಿದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಂಚಾಲಕರಾದ ಶ್ರೀ ಎಸ್. ಜಯವಿಕ್ರಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾನಿರ್ದೇಶಕ ಡಾ| ಕಿಶೋರ್ ಕುಮಾರ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನವೀನ್ ಚಂದ್ರ, ಶ್ರೀ ವೆಂಕಟೇಶ್ ಶಿವಭಕ್ತಿಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು, ಸಂಘದ ಸದಸ್ಯರಾದ ಶ್ರೀ ಪದ್ಮನಾಭ ಕೋಟ್ಯಾನ್, ಶ್ರೀ ನಾರಾಯಣ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡಾ| ಬಿ.ಜಿ ಸುವರ್ಣ, ಬಿ.ಪಿ.ಹರೀಶ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಕರಾದ ( ನಿರ್ದೇಶಕರು) ಶ್ರೀ ಪುರುಷೋತ್ತಮ ಪೂಜಾರಿ ಬಿ, ಶ್ರೀ ಸಂದೀಪ್ ರಾವ್ ಮುಂತಾದವರು ಅತಿಥಿಗಳಾಗಿದ್ದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ| ಗಂಗಾಧರ್.ಬಿ ಸ್ವಾಗತಿಸಿದರು. ಅಸೋಸಿಯೇಟ್ ಪ್ರೊಫೆಸರ್ ಡಾ| ಉಮ್ಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕ ಡಾ.ದಿನಕರ್ ಎಸ್.ಪಚ್ಚನಾಡಿ ವಂದಿಸಿದರು.
40 ತಂಡಗಳು :
ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ತೆಂಕನಡಿಯೂರು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದಿರೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಜಿರೆ ಸೇರಿದಂತೆ ಮಂಗಳೂರು ಹಾಗೂ ಸುತ್ತಮುತ್ತಲಿನ ಕಾಲೇಜುಗಳ ಸುಮಾರು 40 ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ದಿನಾಂಕ 09-01-2015ರ ಶುಕ್ರವಾರದಂದು ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು.