ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಬೆಂಗಳೂರಿನ ಕಾಕ್ಸ್ಟೌನ್ನಲ್ಲಿ ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ (ಐ.ಎಂ) ಸಂಘಟನೆಯ ಮೂವರು ಶಂಕಿತ ಉಗ್ರರನ್ನು ಬಂಧಿಸಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಐ.ಎಂ ಸಂಘಟನೆಯ ಸೈಯದ್ ಇಸ್ಮಾಯಿಲ್ ಅಫಕ್ (34), ಸದ್ದಾಂ ಹುಸೇನ್ (35) ಮತ್ತು ಅಬ್ದುಸ್ ಸುಬುರ್ (24) ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಗರದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ ಮತ್ತು ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಸಿಬ್ಬಂದಿ ಎರಡೂ ಕಡೆ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ಶೋಧ ನಡೆಸಿದರು.
‘ಸೈಯದ್ ಮತ್ತು ಸದ್ದಾಂ, ಕಾಕ್ಸ್ಟೌನ್ನ ಮನೆಯಲ್ಲಿ ಸಿಕ್ಕಿಬಿದ್ದರು. ಇವರಿಬ್ಬರೂ ಮೂಲತಃ ಭಟ್ಕಳದವರು. ಎಂಬಿಎ ವಿದ್ಯಾರ್ಥಿ ಅಬ್ದುಸ್ ಭಟ್ಕಳದಲ್ಲಿ ವಾಸವಾಗಿದ್ದ. ಆತನ ಮನೆಯಲ್ಲಿ ಬಾಂಬ್ ತಯಾರಿಕೆಗೆ ಬಳಸುವ ಸುಮಾರು 3 ಕೆ.ಜಿ ಅಮೋನಿಯಂ ನೈಟ್ರೇಟ್, ಡಿಟೊನೇಟರ್, ಎಲೆಕ್ಟ್ರಿಕಲ್ ಟೈಮರ್, ಸರ್ಕಿಟ್ ಬೋರ್ಡ್, ಪಿವಿಸಿ ಪೈಪ್, ಜಿಲೆಟಿನ್ ವಶಪಡಿಸಿಕೊಳ್ಳಲಾಗಿದೆ. ಕಾಕ್ಸ್ಟೌನ್ನ ಮನೆಯಲ್ಲಿ ಆರೋಪಿಗಳಿಗೆ ಸೇರಿದ ಮೊಬೈಲ್, ಲ್ಯಾಪ್ಟಾಪ್ ಹಾಗೂ ಇತರ ಉಪಕರಣಗಳು ಸಿಕ್ಕಿವೆ’ ಎಂದು ರೆಡ್ಡಿ ಮಾಹಿತಿ ನೀಡಿದರು.
ಆರೋಪಿಗಳು ಐ.ಎಂ ಹಾಗೂ ಇತರ ಸಮಾನಮನಸ್ಕ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದರು. ವಿದೇಶದಲ್ಲಿರುವ ಐ.ಎಂ ಮುಖಂಡನ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಬಂಧಿತರ ಪೂರ್ವಾಪರ, ಈ ಹಿಂದೆ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆಯೇ ಅಥವಾ ಯಾವುದಾದರೂ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಬಂಧಿತರ ವಿರುದ್ಧ ಅಪರಾಧ ಸಂಚು ಆರೋಪ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚರ್ಚ್ ಸ್ಟ್ರೀಟ್ ಪ್ರಕರಣದಲ್ಲಿ ಬಂಧಿತರ ಪಾತ್ರ ಇಲ್ಲ
ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಸ್ಫೋಟದ ಸ್ಥಳದಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರ ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳಿಗೆ ಸಾಮ್ಯತೆ ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
–ಎಂ.ಎನ್.ರೆಡ್ಡಿ, ಬೆಂಗಳೂರು ಪೊಲೀಸ್ ಕಮಿಷನರ್