ಬೆಂಗಳೂರು: ಗಿರಿನಗರ ಸಮೀಪದ ಮುನೇಶ್ವರ ಬ್ಲಾಕ್ 17ನೇ ಅಡ್ಡರಸ್ತೆಯಲ್ಲಿರುವ ಶ್ರೀ ಗಣೇಶ್ ಜ್ಯುವೆಲರ್‌್ಸ್ ಮಳಿಗೆಯ ಗೋಡೆಗೆ ಕನ್ನ ಕೊರೆದಿರುವ ಕಳ್ಳರು ಸುಮಾರು ರೂ. 30 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ.
ಮಳಿಗೆಯ ಗೋಡೆಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಆಸ್ಪತ್ರೆ ಇದೆ. ಒಂದೂವರೆ ತಿಂಗಳಿನಿಂದ ಆ ಆಸ್ಪತ್ರೆ ಬಂದ್ ಆಗಿತ್ತು. ಆದರೆ, ಆಸ್ಪತ್ರೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ.
ಹೀಗಾಗಿ ಸೋಮವಾರ ಬೆಳಗಿನ ಜಾವ ಆಸ್ಪತ್ರೆ ಕಟ್ಟಡದೊಳಗೆ ಬಂದಿರುವ ಕಳ್ಳರು, ಮಳಿಗೆಯ ಗೋಡೆಗೆ ಕನ್ನ ಕೊರೆದು ಒಳನುಗ್ಗಿದ್ದಾರೆ. ನಂತರ ಮಳಿಗೆಯ ಕಪಾಟುಗಳಲ್ಲಿದ್ದ ಸುಮಾರು ಅರ್ಧ ಕೆ.ಜಿ ಚಿನ್ನಾಭರಣ ಮತ್ತು 60 ಕೆ.ಜಿ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಭದ್ರತಾ ಪೆಟ್ಟಿಗೆಯಲ್ಲಿದ್ದ ಚಿನ್ನದ ಆಭರಣಗಳು ಸುರಕ್ಷಿತವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
‘ಆರೋಪಿಗಳು ಬೆಳಗಿನ ಜಾವ 3.53ಕ್ಕೆ ಮಳಿಗೆಯೊಳಗೆ ಬಂದಿದ್ದಾರೆ. ಈ ದೃಶ್ಯ ಅಂಗಡಿಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಅವರು ಮುಸುಕುಧಾರಿಗಳಾಗಿದ್ದರಿಂದ ಗುರುತು ಸಿಗುತ್ತಿಲ್ಲ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್.ಲೋಕೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳಿಗೆಯ ಮಾಲೀಕ ಅನಿಲ್ಕುಮಾರ್ ಜೈನ್ ಅವರು ಭಾನುವಾರ ವಹಿವಾಟು ಮುಗಿದ ನಂತರ ರಾತ್ರಿ 9 ಗಂಟೆಗೆ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋಗಿದ್ದರು. ಅವರು ಸೋಮವಾರ ಬೆಳಿಗ್ಗೆ ಅಂಗಡಿಗೆ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ.
ರಾಜಸ್ತಾನ ಮೂಲದ ಅನಿಲ್ಕುಮಾರ್, 15 ವರ್ಷಗಳ ಹಿಂದೆ ಈ ಮಳಿಗೆ ಆರಂಭಿಸಿದ್ದರು. ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೂಲಿ ಕಾರ್ಮಿಕನ ಕೊಲೆ
ಎಚ್‌ಎಸ್‌ಆರ್ ಲೇಔಟ್ ಸಮೀಪದ ಇಬ್ಬಲೂರಿನ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ವೊಂದರ ಬಳಿ ದುಷ್ಕರ್ಮಿಗಳು ಭಾನುವಾರ ರಾತ್ರಿ ಮಹತೊ (21) ಎಂಬ ಕೂಲಿ ಕಾರ್ಮಿಕನನ್ನು ಕೊಲೆ ಮಾಡಿದ್ದಾರೆ.
ಬಿಹಾರ ಮೂಲದ ಮಹತೊ, ಆ ಅಪಾರ್ಟ್‌ಮೆಂಟ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಅಪಾರ್ಟ್‌ಮೆಂಟ್‌ನ ಸಮೀಪವೇ ಶೆಡ್‌ನಲ್ಲಿ ವಾಸವಾಗಿದ್ದರು. ಮಹತೊ ರಾತ್ರಿ 10 ಗಂಟೆ ಸುಮಾರಿಗೆ ಮೂತ್ರವಿಸರ್ಜನೆ ಮಾಡಲು ಶೆಡ್‌ನ ಹಿಂಭಾಗದ ಖಾಲಿ ಜಾಗಕ್ಕೆ ಹೋಗಿದ್ದರು. ಆಗ ದುಷ್ಕರ್ಮಿಗಳು ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ ಮತ್ತು ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮೆಹತೊ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ಅವರ ಕುಟುಂಬ ಸದಸ್ಯರು ಬಿಹಾರದಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.