ಮಂಗಳೂರು,ಜ.19: : ಪ್ರಪಂಚವನ್ನೇ ಅರಿಯದ ನವಜಾತ ಶಿಶುವಿನ ಶವವೊಂದು ಕದ್ರಿ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ ನ ಬಾವಿಯೊಂದರಲ್ಲಿ ದೊರಕಿದೆ. ಬಾವಿ ಹತ್ತಲು ಶಕ್ತವಲ್ಲದ ಮಗುವಿನ ಮೃತದೇಹ ಬಾವಿಯಲ್ಲಿ ದೊರಕಿರುವುದು ತೀವ್ರ ಕುತೂಹಲಕ್ಕೆಡೆಮಾಡಿದೆ.
ಬೆಂದೂರ್ ವೆಲ್‍ನ ಕಲ್ಪನಾ ರಸ್ತೆಯಲ್ಲಿರುವ ಕಸ್ತೂರಿ ಐತಾಳ್ ಎಂಬವರಿಗೆ ಸೇರಿದ ಬಾವಿಯಿಂದ ನೆರೆ ಮನೆಯವರೂ ನೀರು ಸೇದುತ್ತಿದ್ದರು. ಅದರಂತೆ ಪ್ರತಿನಿತ್ಯ ಶುದ್ಧವಾಗಿರುತ್ತಿದ್ದ ನೀರು ಎರಡು ದಿನಗಳಿಂದ ಕೆಟ್ಟ ವಾಸನೆ ಬರುತ್ತಿತ್ತು. ಪರಿಶೀಲಿಸಲು ಹೋಗದ ಮಂದಿ ಆ ಬಾವಿಯಿಂದ ನೀರು ಸೇದುವುದನ್ನೇ ಬಿಟ್ಟುಬಿಟ್ಟಿದ್ದರು. ಆದರೆ ನಿನ್ನೆ ಮುಂಜಾನೆ ನೀರಿಗೆ ಬಂದವರ ಕಣ್ಣಿಗೆ ಶಿಶುವಿನ ಮೃತ ಶರೀರ ತೇಲುತ್ತಿರುವುದು ಗೋಚರಿಸಿದೆ. ಈ ಸಂದರ್ಭ ಸ್ಥಳೀಯರು ಕದ್ರಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು,
ಸ್ಥಳಕ್ಕೆ ಬಂದ ಪೊಲೀಸರು ಶಿಶುವನ್ನು ಮೇಲೆಕ್ಕೆತ್ತಿದ್ದಾರೆ. ಇನ್ನೂ ಪ್ರಪಂಚವರಿಯದ ಗಂಡು ಮಗುವಿನ ಮೃತದೇಹ ಹಲವರ ಕಣ್ಣಲ್ಲಿ ವಿಷಾದನೀಯ ಮೂಡಿಸಿದೆ. ಆದರೆ ಘಟನೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ. ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವಿನ ಅವಸ್ಥೆ ಇದಾಗಿರ ಬಹುದೆಂದು ಶಂಕಿಸಲಾಗಿದ್ದರೂ, ತನಿಖೆಯಿಂದಷ್ಟೇ ಸತ್ಯ ಹೊರ ಬೀಳಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ.