ಮಂಗಳೂರು,ಜ.19: ಪ್ರಸಾದ್ ಆರ್ಟ್ಗ್ಯಾಲರಿಯು ತನ್ನ 20ನೇ ವರ್ಷಾಚರಣೆ ಅಂಗವಾಗಿ ನಗರದ ಪ್ರಮುಖ ಎಂ.ಜಿ.ರಸ್ತೆಯ ಬಳ್ಳಾಲ್ಬಾಗ್ ಬಳಿಯ ಗ್ಯಾಲರಿಯ ಹಿಂಬದಿಯ ಮನೆಯ ಅಂಗಣದಲ್ಲಿ ‘ಇನ್ಸ್ಟಾಲೇಶನ್ ಆರ್ಟ್’ ಎಂಬ ಕಲಾಪ್ರಕಾರದ ಪ್ರದರ್ಶನವನ್ನು ರವಿವಾರ ಮತ್ತು ಸೋಮವಾರ ಆಯೋಜಿಸಲಾಗಿದ್ದು ಈ ಪ್ರದರ್ಶನದಲ್ಲಿ ಅಂಗಣದಲ್ಲಿರುವ ಮಾವು, ಹಲಸು, ತೆಂಗು, ಬಾಳೆ… ಹೀಗೆ ಹಲವು ಬಗ್ಗೆಯ ಎಲ್ಲ ಗಿಡಮರಗಳ ಬುಡ, ಅಕ್ಕಪಕ್ಕವನ್ನೇ ಕ್ಯಾನ್ವಾಸನ್ನಾಗಿಸಿ ಕಲಾಕೃತಿ ನಿರ್ಮಿಸಲಾಗಿದೆ. ನೇತ್ರಾವತಿ ತಿರುವು ಕುರಿತ ಜಾಗೃತಿ ಮೂಡಿಸುವ ಜತೆಗೆ ಸ್ವಚ್ಛ ಭಾರತ ಸಹಿತ ಮಾಡೆರ್ನ್ ಆರ್ಟ್ಗಳನ್ನು ಒಟ್ಟು 21 ಮಂದಿ ಕಲಾವಿದರು ನಿರ್ಮಿಸಿದ್ದಾರೆ.
ಅಲ್ಲಿ ಕ್ಯಾನ್ವಾಸ್ ಇಲ್ಲ. ಬಣ್ಣವಿಲ್ಲ. ಅದರೂ ಇಲ್ಲಿ ಗಿಡಮರಗಳೇ ಕ್ಯಾನ್ವಾಸ್. ಕಲ್ಲು ಮಣ್ಣುಗಳೇ ಕಲಾಕೃತಿ. ಬಹಳ ಅಪರೂಪವಾಗಿ ನಡೆಯುವಂತಹ ‘ ಈ ಕಲಾ ಪ್ರದರ್ಶನದಲ್ಲಿ ಎತ್ತಿನಹೊಳೆ ತಿರುವು ಯೋಜನೆ ಮುಂದೊಂದು ದಿನ ಯಾವ ರೀತಿ ಪರಿಣಾಮ ಬೀಳಬಹುದು ಎಂಬ ಭೀತಿಯನ್ನು ಇನ್ಸ್ಟಾಲೇಶನ್ ಆರ್ಟ್ ಮೂಲಕ ಕಲಾವಿದ ರಾಜೇಂದ್ರ ಕೇದಿಗೆ ಮತ್ತು ದಿನೇಶ್ ಹೊಳ್ಳ ಪ್ರಸ್ತುತಪಡಿಸಿದ್ದಾರೆ.