ಮೂಡಬಿದ್ರೆ,ಜ.19: ನೇರ ಗುರಿ, ಕಠಿಣ ಪರಿಶ್ರಮವಿದ್ದರೆ ಯಾವ ದಾಖಲೆಯನ್ನು ಮುರಿಯಬಹುದು ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ ಜಿ. ಎನ್. ಡಿ. ಯು ಅಮೃತ್‌ಸರ್ ವಿಶ್ವವಿದ್ಯಾನಿಲಯ ಪಂಜಾಬಿನ ಖುಶ್ಬಿರ್ ಕವ್ರ್. ಆಡುವುದಕ್ಕೆ ನನ್ನ ಮೊದಲ ಪ್ರಾಶಸ್ತ್ಯ. ಪ್ರತಿ ದಿನ ದಾಖಲೆ ಮಾಡುವ ಕನಸು ಹೆಣೆಯುತ್ತಾ ಅವಕಾಶಗಳನ್ನು ಬಾಚಿ ದಾಖಲೆ ಮುರಿಯುವ 20 ರ ಹರೆಯದ ಈ ಪೋರಿ ಈ ಬಾರಿಯ 75 ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಅತ್ಲೆಟಿಕ್ ಚಾಂಪಿಯನ್ ಶಿಪ್ 2015-15 ರ ಮಹಿಳಾ 5000 ಮೀಟರ್ ಕಾಲ್ನಡಿಗೆಯಲ್ಲಿ ತನ್ನ 2011 ರ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಬರೆದಿದ್ದಾರೆ.
ಸಾಧನೆಯ ಲೋಕದಲ್ಲಿ ದಾಪುಗಾಲು ಇಡುತ್ತಿರುವ ಈಕೆಗೆ ಕೋಚ್ ರಶೀನ ಅಲೆಕ್ಸಾಂಡರ್ ಭಾರತಿ ಭಾಸ್ಕರ್ ಹುರಿದುಂಬಿಸುವ ಪರಿ ಮೆಚ್ಚಲೇಬೇಕಾದ್ದು. ಈಗಾಗಲೇ ಹಲವಾರು ಹಂತಗಳಲ್ಲಿ ಸಾಧನೆ ಮೆರೆದು ಕೀರ್ತಿ ಪತಾಕೆ ಹಾರಿಸಿರುವ ಈಕೆ ಈ ಬಾರಿ ತನ್ನ ದಾಖಲೆಯನ್ನೇ ಮುರಿದು ರಾಷ್ಟ್ರೀಯ ಹಂತದಲ್ಲಿ ಹೊಸ ಹೆಸರು ಗೀಚಿದ್ದಾಳೆ. 2011 ರ 5000 ಮೀಟರ್ ಕಾಲ್ನಡಿಗೆಯನ್ನು 23;33. ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದ ಖುಶ್ಬಿರ್ ಕವ್ರ್ ಈಗ ಆಕೆಯ ದಾಖಲೆಯನ್ನು 22:05 ನಿಮಿಷಗಳಲ್ಲಿ ಕ್ರಮಿಸಿ ಹೊಸ ದಾಖಲೆ ಸೃಷ್ಟಿಸಿದ್ದಾಳೆ.
ದಿನದಲ್ಲಿ ಸತತ ಏಳು ಗಂಟೆ ಅಭ್ಯಾಸವನ್ನು ಮಾಡುವ ಈಕೆ ತನ್ನ ದೇಹ ಮತ್ತು ಮನಸ್ಸನ್ನು ಕ್ರೀಡೆಗಾಗಿ ಯಾವತ್ತೂ ಸಜ್ಜುಗೊಳಿಸಿರುತ್ತಾಳೆ ಎಂದು ಈಕೆಯ ಕೋಚ್ ಹರ್ಷ ವ್ಯಕ್ತ ಪಡಿಸುತ್ತಾರೆ. 2010 ರ ಸೀನಿಯರ್ ನ್ಯಾಷನಲ್ ಚಾಂಪಿಯನ್ ಪಡೆದಿರುವ ಈಕೆ, ಕೇರಳದ ನ್ಯಾಷನಲ್ ಕ್ಯಾಂಪೆನ್ನಲ್ಲಿ ತರಬೇತಿ ಪಡೆಯುವ ಪಡೆಯುತ್ತಾ, 2016 ರ ಏಷ್ಯಯನ್ ಒಲಂಪಿಕ್ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಟಿಸಬೇಕೆಂಬುದು ಮುಂದಿರುವ ಗುರಿ ಎಂದು ಮುಗುಳ್ನಗು ಬೀರುತ್ತಾರೆ.
ತನ್ನ ದಾಖಲೆಯನ್ನು ತಾನೇ ಮುರಿದಿರುವುದಕ್ಕೆ ಬಹಳ ಸಂಸವೆನಿಸುತ್ತಿದೆ. ಇದಕ್ಕೆ ನನ್ನ ಕೋಚ್ ಮತ್ತು ಕುಟುಂಬದವರ ಪ್ರೋತ್ಸಾಹವೂ ಇದೆ. ಎರಡನೇ ಬಾರಿ ಮೂಡಬಿದಿರೆಯ ಈ ಮೈದಾನದಲ್ಲಿ ಸಾಧನೆ ತೋರಿಸಿರುವುದಕ್ಕೆ ಬಹಳ ಹೆಮ್ಮೆ ಎನಿಸುತ್ತಿದೆ. ಸುಂದರ ಪರಿಸರ ನನಗೆ ಸಾಥ್ ಆಗಿತ್ತು. ಸಾಧನೆ ನನಗೆ ಬಹಳ ಖುಷಿಯೆನಿಸಿದೆ ಎಂದರು.