ಮನೋರಂಜನೆ

ಫ್ಯಾಷನ್‌ ಹಂಗು ನಟನೆಯ ಚುಂಗು

Pinterest LinkedIn Tumblr

me-121jnkjln_0

ಬ್ಲೆಂಡರ್‌್ಸ ಪ್ರೈಡ್‌ ಬೆಂಗಳೂರು ಫ್ಯಾಷನ್‌ ವೀಕ್‌ನ ೧೨ನೇ ಆವೃತ್ತಿಯಲ್ಲಿ ಇತ್ತೀಚಿಗೆ ಖ್ಯಾತ ವಸ್ತ್ರ ವಿನ್ಯಾಸಕ ರಮೇಶ್‌ ದೆಂಬ್ಲಾ ಅವರ ‘ಕೌಚರ್‌ ರಾಯಲ್‌’ ಸಂಗ್ರಹಗಳ ಪ್ರದರ್ಶನ ನಡೆಯಿತು.

ತಿಳಿ ಗುಲಾಬಿ ಹಾಗೂ ಹಳದಿ ಬಣ್ಣದ ವಸ್ತ್ರಗಳನ್ನು ತೊಟ್ಟು ರೂಪದರ್ಶಿಯರು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ಮದುವೆ, ಪಾರ್ಟಿವೇರ್‌ ಉಡುಪುಗಳು ಸೇರಿದ್ದವು. ಬಹುತೇಕ ಮಾಡೆಲ್‌ಗಳು  ನವಿಲು ಗರಿ ಹಾಗೂ ಫಳಫಳ ಹೊಳೆಯುತ್ತಿದ್ದ ಅಲಂಕೃತ ಹೂಗಳನ್ನು ತಲೆಗೂದಲಿನಲ್ಲಿ ಧರಿಸಿಕೊಂಡು ಕ್ಯಾಟ್‌ವಾಕ್‌ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

‘ಸಿಂಗ್‌ ಸಾಬ್‌ ದಿ ಗ್ರೇಟ್‌’ ಬಾಲಿವುಡ್‌ ಚಿತ್ರದ ಮೂಲಕ ಬಿ ಟೌನ್‌ ಅಂಗಳಕ್ಕೆ ಕಾಲಿಟ್ಟಿರುವ ಮಾಡೆಲ್‌ ಕಂ ನಟಿ ಊರ್ವಶಿ ರೌತೇಲಾ ಅವರು ಷೋ ಸ್ಟಾಪರ್‌ ಆಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದರು. ಗಾಢ ಕೆಂಪು ವರ್ಣದ ಟಾಪ್‌ ಹಾಗೂ ಹಳದಿ ಬಣ್ಣದ ಲೆಹೆಂಗಾ ಧರಿಸಿದ್ದ ಊರ್ವಶಿ ಮೋಹಕ ನಗೆ ಬೀರುತ್ತ, ಎಲ್ಲರತ್ತ ಕೈಬೀಸುತ್ತ ಹೆಜ್ಜೆ ಹಾಕಿದರು. ಇದಕ್ಕೆ ಪ್ರತಿಯಾಗಿ ಪ್ರೇಕ್ಷಕರ ಸಾಲಿನಿಂದ ಶಿಳ್ಳೆ, ಚಪ್ಪಾಳೆಗಳ ಕರತಾಡನ ಪ್ರತಿಧ್ವನಿಸಿತು. ಕೊನೆಗೆ ರಮೇಶ್‌ ದೆಂಬ್ಲಾ ಹಾಗೂ ಮಧುರಿಮ ತುಲಿ ಅವರೊಂದಿಗೆ ಸೆಲ್ಫೀ ಕೂಡ ತೆಗೆಸಿಕೊಂಡರು. ಈ ವೇಳೆ ಅವರು ಕೆಲಕಾಲ ‘ಮೆಟ್ರೊ’ ಜೊತೆಗೂ ಮಾತನಾಡಿದರು.

* ದೆಂಬ್ಲಾ ಅವರ ಸಂಗ್ರಹಗಳು ಹೇಗೆನಿಸಿತು?
ದೆಂಬ್ಲಾ ಅವರು ಫ್ಯಾಷನ್‌ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಸಂಗ್ರಹಗಳಿಗೆ ರ್‍ಯಾಂಪ್‌ ಮೇಲೆ ನಡೆಯುವುದು ಎಂದರೆ ಯಾರಿಗಾದರೂ ಹೆಮ್ಮೆಯ ಸಂಗತಿ. ಮೊದಲ ಬಾರಿಗೆ ಅವರ ಸಂಗ್ರಹಗಳ ಪ್ರದರ್ಶನಕ್ಕೆ ಷೋ ಸ್ಟಾಪರ್‌ ಆಗಿ ಪಾಲ್ಗೊಂಡಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಬೆಂಗಳೂರಿನಲ್ಲಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದು ಇದೇ ಮೊದಲು. ಆದ್ದರಿಂದ ಸಂತಸದಲ್ಲಿ ತೇಲಾಡುತ್ತಿದ್ದೇನೆ.

ಉಡುಪುಗಳಿಗೆ ಅವರು ಆಯ್ಕೆ ಮಾಡಿಕೊಂಡಿರುವ ತಿಳಿ ಗುಲಾಬಿ ಹಾಗೂ ಹಳದಿ ಬಣ್ಣ ಬಹಳ ಆಕರ್ಷಕ, ಪರಿಪೂರ್ಣ ಮತ್ತು ಶ್ರೀಮಂತಿಕೆಯಿಂದ ಕೂಡಿವೆ. ಅವುಗಳನ್ನು ಧರಿಸಿದರೆ ಖಂಡಿತವಾಗಿಯೂ ಎಂತಹವರು ಕೂಡ  ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಮದುವೆಯಂತಹ ಶುಭ ಸಮಾರಂಭಗಳಿಗೆ ಈ ಸಂಗ್ರಹಗಳು ಹೇಳಿ ಮಾಡಿಸಿದಂತಿವೆ. ನಾನಂತೂ ನನ್ನ ಮದುವೆಗೆ ಇಂತಹ ವಸ್ತ್ರಗಳನ್ನು ಧರಿಸಲು ಇಷ್ಟಪಡುತ್ತೇನೆ. ಆದರೆ, ನನಗೆ ಈಗ ಕೇವಲ ೨೦ ವರ್ಷ ವಯಸ್ಸು. ಆದ್ದರಿಂದ ಈಗಂತೂ ಇದು ಸಾಧ್ಯವಾಗುವುದಿಲ್ಲ ಹ್ಹ…ಹ್ಹ…

* ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್‌ ಎಂದರೆ ಏನು?
ಫ್ಯಾಷನ್‌ ಅಂದರೆ ಬೇರೊಬ್ಬರನ್ನು ಅನುಕರಿಸುವುದು, ಕಾಪಿ ಮಾಡುವುದು ಅಲ್ಲ. ನಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಮಾಡುವುದು. ಪ್ರತಿಯೊಬ್ಬರು ಅವರಿಗೆ ಒಪ್ಪುವಂತಹದ್ದನ್ನು ಮಾಡಬೇಕು.

* ಸದ್ಯ ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದೀರಿ?
ಎ.ಪಿ. ಅರ್ಜುನ್‌ ನಿರ್ದೇಶನದ ‘ಐರಾವತ’ ಕನ್ನಡ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಇದರಲ್ಲಿ ನಟ ದರ್ಶನ್‌ ಅವರಿಗೆ ಸಹನಟಿಯಾಗಿದ್ದೇನೆ. ಇದಲ್ಲದೇ ಬಾಲಿವುಡ್‌ನ ಕೆಲ ಚಿತ್ರಗಳು ಕೈಯಲ್ಲಿದ್ದು, ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ. ಇದರ ಮಧ್ಯೆ ಬಿಡುವು ಸಿಕ್ಕಾಗಲೆಲ್ಲ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ.

* ನಿಮ್ಮ ಕನಸಿನ ಯೋಜನೆ ಯಾವುದು?
ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುವುದು, ಬಗೆ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ಫ್ಯಾಷನ್‌ ಕ್ಷೇತ್ರದ ಹೆಸರಾಂತ ವಿನ್ಯಾಸಕರ ಸಂಗ್ರಹಗಳಿಗೆ ಹೆಜ್ಜೆ ಹಾಕುವುದೂ ಸೇರಿದೆ.

* ಆರೋಗ್ಯಯುತ ಜೀವನಶೈಲಿಗೆ ಏನು ಮಾಡುತ್ತೀರಿ?
ಆರೋಗ್ಯಕ್ಕೆ ಯಾವುದರಿಂದ ಒಳ್ಳೆಯದು ಆಗುತ್ತದೆಯೋ ಅದನ್ನು ಮಾಡುತ್ತೇನೆ. ಆರೋಗ್ಯಯುತ ಜೀವನಶೈಲಿ ಹೊಂದುವುದು ಪ್ರತಿಯೊಬ್ಬರಿಗೂ ಮುಖ್ಯ. ಅದರಲ್ಲೂ ಸೆಲೆಬ್ರಿಟಿಗಳಂತೂ ಈ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ.

Write A Comment