ಹುಣಸೂರು: ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 16 ವರ್ಷಗಳಿಂದ ಹೊಗೆಯಾಡುತ್ತಿದ್ದ ಜಾತಿ ದ್ವೇಷವನ್ನು ಬದಿಗಿಟ್ಟು, ದಲಿತರು ಹಾಗೂ ಸವರ್ಣೀಯರು ಒಂದಾದರು. ಹಲವಾರು ಸವರ್ಣೀಯರು ದಲಿತರ ಮನೆಗಳಿಗೆ ಹೋಗಿ ಆತಿಥ್ಯವನ್ನೂ ಸ್ವೀಕರಿಸಿ ಸಹಬಾಳ್ವೆಗೆ ನಾಂದಿ ಹಾಡಿದರು.
ಈ ಖುಷಿ ಕ್ಷಣಕ್ಕಾಗಿ ದಲಿತ ಕೇರಿಯ ಜನರೆಲ್ಲ ಗಡಿಬಿಡಿಯಿಂದ ತಯಾರಿ ಮಾಡಿಕೊಂಡಿದ್ದರು. ಎಲ್ಲೆಲ್ಲೂ ಸಡಗರ ಮನೆ ಮಾಡಿತ್ತು. ಇಡೀ ಕೇರಿಯನ್ನು ಹಸಿರು ತಳಿರು ತೋರಣ, ಶಾಮಿಯಾನದಿಂದ ಅಲಂಕರಿಸಲಾಗಿತ್ತು. ಮನೆಗೆ ಬಂದ ಸವರ್ಣೀಯರನ್ನು ಕೇರಿಯ ಮಕ್ಕಳು ಆರತಿ ಎತ್ತಿ ತಿಲಕವಿಟ್ಟು ಆತ್ಮೀಯವಾಗಿ ಬರಮಾಡಿಕೊಂಡರು.
ಕೇರಿಯ ಯಜಮಾನ ಸಣ್ಣಯ್ಯ ಅವರು ತಮ್ಮ ಗುಡಿಸಲಿನಲ್ಲೇ ಭೋಜನ ಏರ್ಪಡಿಸಿದ್ದರು. ಸಣ್ಣಯ್ಯ ಅವರ ಪತ್ನಿ ಸುಂದ್ರಮ್ಮ ಲಗುಬಗೆಯಿಂದ ಓಡಾಡಿ ಅತಿಥಿಗಳಿಗೆ ಬಿಸಿ ಬಿಸಿ ಊಟ ಬಡಿಸಿದರು. ರಾಗಿಮುದ್ದೆ, ಉಪ್ಪೆಸರು, ಅವರೆಕಾಯಿ ಪಲ್ಯ, ಅನ್ನ– ಸಾರು, ಜತೆಗೆ ಜಿಲೇಬಿ… ಎಲ್ಲವನ್ನೂ ದಲಿತ ಹಾಗೂ ಸವರ್ಣೀಯ ಸಮಾಜದವರು ಒಂದಾಗಿ ಕುಳಿತು ಸವಿದರು.
ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಗಾಗಿ ಹೋರಾಡುವ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಈ ಸಹಬಾಳ್ವೆಯ ಕಾರ್ಯಕ್ರಮ ಆಯೋಜಿಸಿದ್ದರು. ಶಾಸಕ ಮಂಜುನಾಥ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ, ವರದರಾಜು, ಡಿ.ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ದಲಿತಕೇರಿಯ ಶಾಮಿಯಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡೂ ಸಮಾಜದ ನಾಯಕರು ಸಹಬಾಳ್ವೆಯ ಮಂತ್ರ ಪಠಿಸಿದರು. ಇಲ್ಲಿ ನಡೆದ ಬೆಳವಣಿಗೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಶಾಸಕ ಮಂಜುನಾಥ್ ಆಶಿಸಿದರು.
ಮರೆತುಹೋದ ಕಹಿ: ಸುಮಾರು 16 ವರ್ಷಗಳ ಹಿಂದೆ ಗ್ರಾಮದ ಬಸವೇಶ್ವರ ಉತ್ಸವದಲ್ಲಿ ದಲಿತರು ಹಾಗೂ ಸವರ್ಣೀಯರ ಮಧ್ಯೆ ಬಿರುಕು ಮೂಡಿತ್ತು. ದಲಿತರು ದೇವಸ್ಥಾನ ಪ್ರವೇಶಿಸಿ ಪೂಜೆ ಮಾಡಲು ಕೆಲವರು ತಕರಾರು ಮಾಡಿದ್ದರು. ಅಂದಿನಿಂದ ಎರಡೂ ಸಮಾಜಗಳ ಮಧ್ಯೆ ವಿರಸ ಮುಂದುವರಿದೇ ಇತ್ತು. ಗಣರಾಜ್ಯೋತ್ಸವದಂದು ಎಲ್ಲ ವಿಷ ಗಳಿಗೆಗೆ ಅಂತ್ಯ ಹಾಡಲಾಯಿತು.