ಕುಂದಾಪುರ: ಮೈದಾನ ವಿವಾದವೊಂದು ಭಿನ್ನ ಕೋಮುಗಳ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಕೋಟ ಪಡುಕೆರೆಯಲ್ಲಿ ನಡೆದಿದೆ. ಆ ಮೂಲಕ ಹಲವು ವರ್ಷಗಳ ಹಿಂದೆ ಕೋಮು ಗಲಭೆಯುಂಟಾಗಿ ಶಾಂತಿ ಭಂಗವಾದ ಘಟನೆ ಮತ್ತೆ ಮರುಕಳಿಸಲಿದೆಯೇ ಎನ್ನುವ ಸ್ಥಿತಿ ಮತ್ತೆ ನಿರ್ಮಾಣಗೊಂಡಿದೆ. ಒಂದು ವರ್ಷ ಕಾಲ ಪೊಲೀಸ್ ಪಹರೆಯಲ್ಲಿದ್ದ ಕೋಟ ಪಡುಕರೆಯಲ್ಲಿ ಮತ್ತೆ ಕೋಮು ಗಲಭೆಯ ಕಿಡಿ ಹೊತ್ತಿಕೊಂಡಿದ್ದು, ಸ್ಥಳೀಯ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಉರ್ದು ಶಾಲೆಯ ಆಡಳಿತ ಸಮಿತಿಗೂ ಮೈದಾನದ ಜಾಗಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸುವಾಗ ಮಾತಿನ ಚಕಮಕಿ ನಡೆದಿದೆ.
ಕೋಟ ಪಡುಕರೆಯಲ್ಲಿ ಶ್ರೀ ರಾಮ ಮಂದಿರದ ಜಾಗ ಎನ್ನಲಾದ ಸುಮಾರು 1.92 ಎಕ್ರೆ ಭೂಮಿ ಮೈದಾನ ಪ್ರದೇಶವಿದ್ದು, ರಸ್ತೆ ಹಾಗೂ ಮೈದಾನ ಪ್ರದೇಶದ ಮಧ್ಯೆ ರಾಮ ಮಂದಿರದ ಆಡಳಿತ ಸಮಿತಿಯ ನೇತೃತ್ವದಲ್ಲಿ ಆವರಣ ಗೋಡೆ ನಿರ್ಮಿಸಲಾಗುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ಮೊದಲು ಆವರಣಗೋಡೆಯಿಂದ ರಸ್ತೆ ಕಿರಿದಾಗುತ್ತಿದೆ ಎಂದು ವಾದಿಸುತ್ತಿದ್ದ ಉರ್ದು ಶಾಲೆಯ ಆಡಳಿತ ಸಮಿತಿ ಈಗ ಆಟದ ಮೈದಾನ ಶಾಲೆಗೆ ಸೇರಿದ್ದಾಗಿದೆ ಎನ್ನುವಲ್ಲಿಂದ ಘರ್ಷಣೆ ಮುಂದುವರಿದೆ.
ಆದರೆ ರಾಮಂದಿರದ ಆಡಳಿತ ಮಂಡಳಿಯ ಪ್ರಕಾರ ಆವರಣ ಗೋಡೆ ನಿರ್ಮಾಣದ ಸಂದರ್ಭ ಪಂಚಾಯಿತಿ ನಿಯಮದಂತೆ ರಸ್ತೆಯಿಂದ ಮೂರಡಿ ಬಿಡಲಾಗಿದೆ. ಅಲ್ಲದೇ ಸುರಕ್ಷಿತ ಸಂಚಾರದ ದೃಷ್ಟಿಯಿಂದ ಸದ್ಯದ ರಸ್ತೆ ಸೇರಿಸಿ ಸುಮಾರು 20 ಅಡಿಗಳಷ್ಟು ಜಾಗವನ್ನು ಈಗಾಗಲೇ ರಸ್ತೆ ಬಿಟ್ಟಿದ್ದು ಕಾಂಕ್ರೀಟಕರಣವಾಗಿ ಸುಮಾರು 12 ಅಡಿ ಅಗಲವಾಗಿದೆ, ಕಾಂಕ್ರೀಟ್ ಬದಿಯಲ್ಲಿ ಮಣ್ಣು ತುಂಬಿಸುದಷ್ಟೆ ಬಾಕಿಯಿದೆ. ಮತ್ತು ಮೈದಾನ ಸಂಪೂರ್ಣವಾಗಿ ರಾಮ ಮಂದಿರದ ಆಸ್ತಿ ಎನ್ನುತ್ತಿದ್ದಾರೆ.
ಕಳೆದ ಕೆಲವು ದಿಗಳಿಂದ ಇದೇ ವಿಚಾರದಲ್ಲಿ ಸಾಕಷ್ಟು ಬಾರಿ ಇದೇ ಪರಿಸರದಲ್ಲಿ ಗುಂಪುಗಾರಿಕೆ, ಮಾತಿನ ಚಕುಮಕಿ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸ್ಥಳಕ್ಕೆ ಆಗಮಿಸಿದ್ದ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್.ನಾಯಕ್, ಮಲ್ಪೆ ಠಾಣಾಧಿಕಾರಿ ರವಿ ಕುಮಾರ್ ಭೇಟಿ ನೀಡಿದರು. ಸ್ಥಳೀಯ ನಾಯಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದ್ದು, ದೇವಸ್ಥಾನದ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.