ಸವದತ್ತಿ (ಬೆಳಗಾವಿ ಜಿಲ್ಲೆ): ಇಲ್ಲಿನ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾರತ ಹುಣ್ಣಿಮೆ ಜಾತ್ರೆಯು ಮಂಗಳವಾರ ಅದ್ಧೂರಿಯಾಗಿ ನಡೆಯಿತು.
ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು, ಆದಿಶಕ್ತಿ ಶ್ರೀ ರೇಣುಕಾ (ಯಲ್ಲಮ್ಮ) ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂರಾರು ವಿದೇಶಿಗರೂ ಪಾಲ್ಗೊಂಡಿದ್ದರು.
ಜಾತ್ರೆಯ ಅಂಗವಾಗಿ ಏಳುಕೊಳ್ಳದ ನಾಡಿನಲ್ಲಿ ಹಬ್ಬದ ಸಂಭ್ರಮ ಮನೆ-ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನ-ಸಾಗರವೇ ಕಣ್ಣಿಗೆ ಗೋಚರಿಸುತ್ತಿತ್ತು. ಬಾನೆತ್ತರಕ್ಕೆ ಭಂಡಾರ ಹಾರುತ್ತಿತ್ತು. ‘ಉಧೋ… ಉಧೋ… ಯಲ್ಲಮ್ಮ ನಿನ್ಹಾಲ್ಕ ಉಧೋ…’ ಎಂಬ ಜೈಕಾರ ಮುಗಿಲು ಮುಟ್ಟಿತ್ತು.
ಜೋಗತಿಯರ ಕುಣಿತ ಕಣ್ಮನ ಸೆಳೆಯಿತು. ಜಾನಪದ ಕಲಾ ತಂಡಗಳ ಪ್ರದರ್ಶನವು ಭಕ್ತರಿಗೆ ರಸದೌತಣ ಉಣಬಡಿಸಿತು. ಮಲಪ್ರಭೆಯ ಮಡಿಲಲ್ಲಿ ಪವಿತ್ರ-ಸ್ನಾನ ಮಾಡಿದ ಭಕ್ತರು ಯಲ್ಲಮ್ಮನ ದರ್ಶನ ಪಡೆದರು. ಖಾದ್ಯಗಳನ್ನು ತಯಾರಿಸಿ, ನೈವೇದ್ಯ ಅರ್ಪಿಸಿದರು. ಹಲವರು ಮಂದಿರದ ಸುತ್ತ ಉರುಳು ಸೇವೆ, ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.