ಕುಂದಾಪುರ: ಕ್ಷುಲ್ಲಕ ಕಾರಣವೊಂದಕ್ಕೆ ಯುವತಿಯೋರ್ವಳಿಗೆ ಕಾಲೇಜು ಯುವಕನೋರ್ವ ಹಲ್ಲೆ ನಡೆಸಿ, ಅವ್ಯಾಚವಾಗಿ ಬೈದಿದ್ದಲ್ಲದೇ ಜಾತಿ ನಿಂಧನೆ ನಡೆಸಿದ್ದಾನೆಂದು ಯುವತಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಯುವತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ತಾಲೂಕಿನ ಕಾವ್ರಾಡಿ ಪಡುವಾಲ್ತೂರು ಗ್ರಾಮದ ಪದ್ದು ಹಾಗೂ ಗಣಪ ಎನ್ನುವವರ ಪುತ್ರಿ ಸುಜಾತಾ (20) ಎನ್ನುವವಳೇ ಹಲ್ಲೆಗೊಳಗಾದ ಯುವತಿಯಾಗಿದ್ದಾಳೆ. ಪದವಿ ವ್ಯಾಸಂಗ ಮಾಡುತ್ತಿರುವ ಕೀರ್ತನ್ ಶೆಟ್ಟಿ ಎಂಬಾತ ಹಲ್ಲೆ ನಡೆಸಿ ಜಾಂತಿ ನಿಂಧನೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಘಟನೆ ವಿವರ: ಕಾವ್ರಾಡಿಯ ಪಡುವಾಲ್ತೂರು ನಿವಾಸಿಯಾದ ಸುಜಾತ ಇಲ್ಲಿನ ದಲಿತ ಕಾಲೋನಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದು ಗೇರು ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ಕಾವ್ರಾಡಿಯ ಇಲ್ಲಿನ ಸರಕಾರಿ ಶಾಲೆಗೆ ಸಮೀಪವಿರುವ ಈ ಪ್ರದೇಶದಲ್ಲಿ ಸುಮಾರು 7-8 ದಲಿತ ಕುಟುಂಬಗಳಿದ್ದು ಇಲ್ಲಿನ ಸಾರ್ವಜನಿಕ ಬಾವಿಯನ್ನು ಕುಡಿಯುವ ನೀರಿಗಾಗಿ ಆಶ್ರಯಿಸಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಬಂದ ಸುಜಾತ ಮನೆಯಿಂದ ನೀರು ತರಲು ಬಾವಿಗೆ ತೆರಳಿದ್ದ ಸಂದರ್ಭದಲ್ಲಿ ಸರಕಾರಿ ಶಾಲೆ ಸಮೀಪದ ಮೈದಾನದಲ್ಲಿ ವಾಲಿಬಾಲ್ ಆಡುತಿದ್ದ ಯುವಕರ ಗುಂಪಿನಲ್ಲಿದ್ದ ಕೀರ್ತನ್ ಶೆಟ್ಟಿ ಈಕೆಯನ್ನು ತಳ್ಳಿ, ಅವ್ಯಾಚವಾಗಿ ಬೈದು ಜಾತಿ ನಿಂದನೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಈ ಮೈದಾನದಲ್ಲಿ ಆಟವಾಡುವ ವೇಳೆ ನೀರು ತರಲು ಹೋಗುವ ಜನರಿಗೆ ವಾಲಿಬಾಲ್ ಚೆಂಡು ತಗುಲುತ್ತಿದ್ದು ಈ ವಿಚಾರದಲ್ಲಿ ಯುವಕರಿಗೂ ಮತ್ತು ಸ್ಥಳೀಯರಿಗೂ ಮಾತುಕತೆ ನಡೆದಿತ್ತಾದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಮಂಗಳವಾರ ಸಂಜೆಯೂ ನೀರು ತರಲು ಹೋಗುತ್ತಿದ್ದ ಸುಜಾತಾಗೆ ವಾಲಿಬಾಲ್ ಚೆಂಡು ತಗುಲಿದ್ದು ಇದನ್ನು ಆಕ್ಷೇಪಿಸಿದ್ದ ವೇಳೆ ಕೀರ್ತನ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ ತಳ್ಳಿದ ರಭಸಕ್ಕೆ ನೆಲಕ್ಕುರುಳಿದ ಸುಜಾತಾಗೆ ಪ್ರಜ್ಞೆ ತಪ್ಪಿದ್ದು ಆಕೆಯ ತಾಯಿ ಪದ್ದು ಆಗಮಿಸಿ ಆಕೆಯನ್ನು ಕುಟುಂಬಿಕರ ಸಹಾಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಹೇಳಿಕೆ ಪಡೆದಿದ್ದಾರೆ.