ಮನೆಗಳಲ್ಲಿ ಸಾಕಿರುವ ಬೀದಿ ನಾಯಿಗಳು, ಭಾರತೀಯ ಹಾಗೂ ವಿದೇಶಿ ತಳಿಗಳ ನಾಯಿಗಳು, ಬೆಕ್ಕು ಹಾಗೂ ಅವುಗಳ ಮಾಲೀಕರಿಗಾಗಿ ‘ಇಂಟರ್ ನ್ಯಾಷನಲ್ ಪೆಟ್ ಟ್ರೇಡ್ ಫೇರ್’ ಅನ್ನು ನಗರದಲ್ಲಿ ಆಯೋಜಿಸಲಾಗಿದೆ. ಕ್ರೀಚರ್ ಕಂಪ್ಯಾನಿಯನ್ ಮ್ಯಾಗಜೀನ್ ‘ಇಂಡಿಯಾ ಇಂಟರ್ ನ್ಯಾಷನಲ್ ಪೆಟ್ ಟ್ರೇಡರ್ಸ್ ಫೇರ್(ಐಐಪಿಟಿಎಫ್)’ ಸಹಯೋಗದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಾಕುಪ್ರಾಣಿಗಳ ಆರೈಕೆ, ಅವುಗಳನ್ನು ಮನೆಗಳಿಗೆ ತರುವ ಮುನ್ನ ಗಮನದಲ್ಲಿಡಬೇಕಾದ ಅಂಶಗಳು, ಅವುಗಳ ಉತ್ತಮ ಆರೈಕೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆಗಳು ಕಳೆದ ಎಂಟು ವರ್ಷಗಳಿಂದ ‘ಇಂಟರ್ನ್ಯಾಷನಲ್ ಪೆಟ್ ಟ್ರೇಡ್ ಫೇರ್’ ಆಯೋಜಿಸುತ್ತಿದೆ. ಇದೇ 6ರಿಂದ ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಮೊದಲ ಎರಡು ದಿನಗಳು ಪೆಟ್ ಕೌನ್ಸಿಲಿಂಗ್, ವೆಟ್ ಸಿಂಫೊನಿ, ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ ಉದ್ಯಮಿಗಳ ಸಮ್ಮೇಳನ ನಡೆಯಲಿದೆ. ಪೆಟ್ ಕೌನ್ಸಿಲಿಂಗ್ನಲ್ಲಿ ಶ್ವಾನ, ಬೆಕ್ಕುಗಳ ಮಾಲೀಕರಿಗೆ ಪ್ರಾಣಿಗಳ ನಡವಳಿಕೆ, ಅವುಗಳ ಲಾಲನೆ, ಪಾಲನೆ, ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಯಾರು ಯಾವ ರೀತಿಯ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದು ಸೂಕ್ತ ಎಂದು ಕೌನ್ಸಿಲಿಂಗ್ ಮಾಡಲಾಗುತ್ತದೆ. ಇದರಲ್ಲಿ ಪೆಟ್ ಬಿಹೇವಿಯರಿಸ್ಟ್ ಅಮೃತ್ ಹಾಗೂ ಅವರ ಸಂಸ್ಥೆಯ ಸದಸ್ಯರು ಭಾಗವಹಿಸಲಿದ್ದಾರೆ.
‘ವೆಟ್ ಸಿಂಫೊನಿ’ಯಲ್ಲಿ ದೇಶ ವಿದೇಶಗಳಿಂದ ಬರುವ ಪಶುವೈದ್ಯರು ಹಾಗೂ ತಜ್ಞರು ಭಾಗವಹಿಸಲಿದ್ದಾರೆ. ಇವರು ನಡೆಸುವ ಸಭೆಯಲ್ಲಿ ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಬರಬಹುದಾದ ರೋಗ, ಹೊಸದಾಗಿ ಆವಿಷ್ಕರಿಸಲಾಗಿರುವ ತಂತ್ರಜ್ಞಾನ ಹಾಗೂ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಚರ್ಚೆ ಹಾಗೂ ವಿಚಾರ ವಿನಿಮಯ ನಡೆಸಲಾಗುತ್ತದೆ.
ಇದರಿಂದ ಅತ್ಯಾಧುನಿಕ ತಂತ್ರಜ್ಞಾನಗಳ ವಿನಿಮಯವಾಗಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಲಾಗಿದೆ. ಉದ್ಯಮಿಗಳ ಸಭೆಯಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಉದ್ಯಮಿಗಳು ಬರಲಿದ್ದಾರೆ. ಇಲ್ಲಿ ಪ್ರಾಣಿಗಳು ಸೇವಿಸುವ ಆಹಾರ, ಅವುಗಳ ಆರೈಕೆಗೆ ಇರುವ ಹೊಸ ವಿಧಾನ ಹಾಗೂ ಭಾರತದಲ್ಲಿ ತಯಾರಾಗುವ ಪ್ರಾಣಿಗಳ ಆಹಾರ ಪದಾರ್ಥಗಳ ರಫ್ತು ಹಾಗೂ ಆಮದಿನ ಬಗ್ಗೆ ಚರ್ಚಿಸಲಾಗುವುದು. ಇದರೊಂದಿಗೆ ಪ್ರಾಣಿಗಳಿಗೆ ಬಳಸುವ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡಲು ಸ್ಟಾಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಫ್ಯಾಷನ್ ಷೋ
ಸಾಕು ಪ್ರಾಣಿಗಳಿಗಾಗಿ 9 ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೆಲ್ ಡ್ರೆಸ್ಡ್, ವೆಲ್ ಬಿಹೇವ್ಡ್, ವೆಲ್ ಟ್ರೇನ್ಡ್, ವೆರಿ ಹ್ಯಾಪಿ, ಮೇಡ್ ಫಾರ್ ಈಚ್ ಅದರ್ (ಮಾಲೀಕರೊಂದಿಗೆ ಪ್ರೀತಿಯಿಂದ ಇರುವ ಪ್ರಾಣಿಗಳ ಸ್ಪರ್ಧೆ), ರಿಂಗ್ ಒಳಗೆ ಜಿಗಿಯುವುದು, ಸಣ್ಣ ಸುರಂಗದಲ್ಲಿ ತೆವಳುವುದು ಹೀಗೆ ವಿಭಿನ್ನ ಸ್ಪರ್ಧೆಗಳನ್ನು ನಡಸಲಾಗುವುದು.
ಇದರೊಂದಿಗೆ ಪ್ರಾಣಿಗಳ ವಯಸ್ಸಿಗೆ ತಕ್ಕಂತೆಯೂ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಭಾನುವಾರ (ಫೆ.8) ಬೆಳಿಗ್ಗೆ 10ಕ್ಕೆ ನಾಯಿಗಳ ಷೋ, ಮಧ್ಯಾಹ್ನ 1ಕ್ಕೆ ಬೆಕ್ಕುಗಳಿಗಾಗಿ ಪೆಟ್ ಷೋ ಹಾಗೂ ಸಂಜೆ ಫ್ಯಾಷನ್ ಷೋ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.
ಕಳೆದ ವರ್ಷ ಪುಣೆಯಲ್ಲಿ 7ನೇ ಆವೃತ್ತಿಯನ್ನು ನಡೆಸಿದ್ದು, ಅದರಲ್ಲಿ 12 ಸಾವಿರ ಮಂದಿ ಭಾಗವಹಿಸಿದ್ದರು. ಈ ಬಾರಿ ಬೆಂಗಳೂರಿನಲ್ಲಿ ಸಾಕುಪ್ರಾಣಿಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಭಾಗವಹಿಸುವವರ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಐಐಪಿಟಿಎಫ್ ನಿರ್ದೇಶಕ ಬಿನಾಯ್ ಸಾಹಿ.
ಇಂಟರ್ನ್ಯಾಷನಲ್ ಪೆಟ್ ಟ್ರೇಡ್ ಫೇರ್ 2015ರಲ್ಲಿ ಭಾಗವಹಿಸಲು ಬಯಸುವವರು ವೆಬ್ಸೈಟ್ಗೆ ಲಾಗ್ ಇನ್ ಆಗಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು, ಯಾವುದೇ ಮಿತಿ ಇಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ತಲಾ ₨ 99 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಪ್ರಾಣಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದರೊಂದಿಗೆ ಬೀದಿ ನಾಯಿಗಳ ದತ್ತು ನೀಡುವ/ಪಡೆಯುವ ಕಾರ್ಯಕ್ರಮ ಸಹ ಮೂರೂ ದಿನಗಳು ನಡೆಯಲಿದೆ.
ಸ್ಥಳ: ಕೆಟಿಪಿಒ, ಕೈಗಾರಿಕಾ ಪ್ರದೇಶ, ವೈಟ್ಫೀಲ್ಡ್. ದಿನಾಂಕ: ಫೆಬ್ರುವರಿ 6ರಿಂದ 8. ಉದ್ಘಾಟನೆ: ಬೆಳಿಗ್ಗೆ 11.30. ಮಾಹಿತಿಗೆ: http://tradeshows. tradeindia.com/
ಬೆಂಗಳೂರಿನಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಎಷ್ಟೋ ಮಂದಿಗೆ ಸಾಕು ಪ್ರಾಣಿಗಳ ಆರೈಕೆ ಹಾಗೂ ಪಾಲನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಮಾಲೀಕರು ಹಾಗೂ ಸಾಕು ಪ್ರಾಣಿಗಳ ನಡುವಿನ ಬಾಂಧವ್ಯ ಸರಿಯಾಗಿ ಬೆಳೆಯುವುದಿಲ್ಲ. ಅದಕ್ಕಾಗಿ ಸೂಕ್ತ ಅರಿವು ಮೂಡಿಸುತ್ತೇವೆ.
ಇನ್ನು ಪ್ರಾಣಿಗಳನ್ನು ಮನೆಗೆ ತರುವ ಮುನ್ನ ಗಮನಿಸಬೇಕಾದ ವಿಷಯಗಳ ಬಗ್ಗೆ ಇಲ್ಲಿ ಕೌನ್ಸಿಲರ್ಗಳು ಮಾಹಿತಿ ನೀಡುತ್ತಾರೆ. ಇದರಿಂದ ಮನೆಗಳಲ್ಲಿರುವ ಸಾಕುಪ್ರಾಣಿಗಳ ಆರೈಕೆ ತುಂಬಾ ಸುಲಭ ಹಾಗೂ ಚೆನ್ನಾಗಿ ಆಗುತ್ತದೆ. ಅಲ್ಲದೆ ಮೂರೂ ದಿನಗಳು ಪ್ರಾಣಿಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು. ಅದಕ್ಕಾಗಿ ಪಶು ವೈದ್ಯರನ್ನೂ ನೇಮಿಸಲಾಗಿದೆ.
–ಬಿನಾಯ್ ಸಾಹಿ, ನಿರ್ದೇಶಕ, ಐಐಪಿಟಿಎಫ್