ಬೆಂಗಳೂರು: ಪೀಣ್ಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಾರ್ಯಾಚರಣೆಯಿಂದ ಭಾರಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ರಾಜ್ಯದ 21 ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ನಡೆಸಲಿವೆ.
ಮೆಜೆಸ್ಟಿಕ್ನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ಭಾಗದ ಬಸ್ಗಳನ್ನು ಸೆಪ್ಟೆಂಬರ್ನಲ್ಲಿ ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ 116, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ 86, ಕೆಎಸ್ಆರ್ಟಿಸಿಯ 101 ಹಾಗೂ ಮಹಾರಾಷ್ಟ್ರಕ್ಕೆ ತೆರಳುವ ಒಂದು ಅಂತರರಾಜ್ಯ ಬಸ್ ಸಂಚಾರ ಸೇವೆಯನ್ನು ಪೀಣ್ಯ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ಮೂರು ನಿಗಮಗಳಿಗೆ ಮಾಸಿಕ ತಲಾ 70 ಲಕ್ಷ ರೂ. ನಷ್ಟ ಉಂಟಾಗುತ್ತಿತ್ತು. ಕಳೆದ ಮೂರು ತಿಂಗಳಲ್ಲೇ 12 ಕೋಟಿ ನಷ್ಟ ಉಂಟಾಗಿತ್ತು ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.
ಪ್ರಯಾಣಿಕರು ಆರಂಭದಲ್ಲೇ ಈ ಬಸ್ ನಿಲ್ದಾಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಗರದ ಹೊರಭಾಗದಲ್ಲಿರುವುದರಿಂದ ತೆರಳುವುದು ಕಷ್ಟ ಎಂಬ ಅನಿಸಿಕೆ ಹಂಚಿಕೊಂಡಿದ್ದರು. ಒಂದು ತಿಂಗಳ ಅಂತರದಲ್ಲಿ ಸುಮಾರು 300 ಬಸ್ಗಳನ್ನು ಸ್ಥಳಾಂತರಿಸಲಾಗಿತ್ತು. ಪ್ರಯಾಣಿಕರ ನೀರಸ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಉಳಿದ ಬಸ್ಗಳ ಸ್ಥಳಾಂತರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಬಸ್ಗಳನ್ನು ಮತ್ತೆ ಮೆಜೆಸ್ಟಿಕ್ಗೆ ಸ್ಥಳಾಂತರಿಸಬೇಕು ಎಂದು ಮೂರು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕಳೆದ ವಾರ ಸಾರಿಗೆ ಸಚಿವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ‘ಪೀಣ್ಯ ನಿಲ್ದಾಣದಿಂದ ಸಂಚಾರದಿಂದ 3 ನಿಗಮಗಳಿಗೆ ಸುಮಾರು 7 ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ ಮೆಜೆಸ್ಟಿಕ್ನಿಂದ ಬಸ್ ಓಡಿಸುವಂತೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
‘ಬೆಂಗಳೂರಿನಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಹೋಗುವ ಬಸ್ಗಳು ಮೆಜೆಸ್ಟಿಕ್ನಿಂದ ಹೊರಟು ಪೀಣ್ಯ ನಿಲ್ದಾಣದ ಮೂಲಕ ತೆರಳಲಿವೆ. ಆ ಕಡೆಯಿಂದ ಬರುವ ಬಸ್ಗಳು ಕೂಡ ಪೀಣ್ಯ ನಿಲ್ದಾಣದ ಮೂಲಕ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸಲಿವೆ. ಪೀಣ್ಯ ಬಸ್ ನಿಲ್ದಾಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು’ ಎಂದರು.
ಖಾಸಗಿ ಬಸ್ಗಳಿಂದ ನಷ್ಟ: ‘ಪೀಣ್ಯ ನಿಲ್ದಾಣಕ್ಕೆ ಬಸ್ಗಳ ಸ್ಥಳಾಂತರ ಮಾಡಿದ್ದರಿಂದ ಖಾಸಗಿ ಬಸ್ಗಳಿಗೆ ಭಾರಿ ಲಾಭವಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ಸುಮಾರು 700ಕ್ಕೂ ಅಧಿಕ ಖಾಸಗಿ ಬಸ್ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಬಸ್ಗಳಿಂದ ನಿಗಮಕ್ಕೆ ಕನಿಷ್ಠ 4 ಲಕ್ಷ ನಷ್ಟ ಆಗುತ್ತಿದೆ. ಬಸ್ಗಳನ್ನು ಸ್ಥಳಾಂತರ ಮಾಡಿದ್ದರೆ ಸರಿಯಾಗುತ್ತಿತ್ತು. ಇನ್ನೂ 12 ತಿಂಗಳು ಬಸ್ಗಳು ಪೀಣ್ಯದಿಂದ ಸಂಚಾರ ನಡೆಸಿದರೆ ನಿಗಮಗಳಿಗೆ 48 ಕೋಟಿ ನಷ್ಟ ಉಂಟಾಗಲಿದೆ’ ಎಂದು ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪೀಣ್ಯ ನಿಲ್ದಾಣಕ್ಕೆ 39 ಕೋಟಿ ವೆಚ್ಚ
೬ ಎಕರೆ ೨೨ ಗುಂಟೆ ವಿಸ್ತೀರ್ಣದಲ್ಲಿ ೩೯.೨೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತವಾದ ನಿಲ್ದಾಣದಲ್ಲಿ ವಾಣಿಜ್ಯ ಸಮುಚ್ಚಯ, ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್, ಉಪಹಾರ ಗೃಹ, ಲಗೇಜ್ ಕೊಠಡಿ, ಪ್ರಯಾಣಿಕರ ಕಾಯುವ ಹಜಾರ, ಶೌಚಾಲಯ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ ಇದೆ.
ಕೆಎಸ್ಆರ್ಟಿಸಿಯ 8,300 ಬಸ್ಗಳ ಪೈಕಿ ಕರ್ನಾಟಕ, ತುಮಕೂರು, ಪಾವಗಡ, ದಾವಣಗೆರೆ, ಕುಣಿಗಲ್, ಹಾಸನ, ಚಿಕ್ಕಮಗಳೂರು, ಮಂಗಳೂರು ವಲಯಗಳ 21 ಜಿಲ್ಲೆಗಳಿಗೆ 1021 ಬಸ್ಗಳು ಪೀಣ್ಯದಿಂದ ಸಂಚಾರ ನಡೆಸಲಿವೆ ಎಂದು ಘೋಷಿಸಲಾಗಿತ್ತು. ೬ ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದೂ ಪ್ರಕಟಿಸಲಾಗಿತ್ತು. ಪೀಣ್ಯ ವಾಣಿಜ್ಯ ಸಂಕೀರ್ಣದಿಂದ ಪ್ರತಿವರ್ಷ ₨೩ ಕೋಟಿ ೨೦ ಲಕ್ಷ ಆದಾಯವನ್ನೂ ನಿರೀಕ್ಷಿಸಲಾಗಿತ್ತು. ಪ್ರಯಾಣಿಕರಿಗೆ ಅನುಕೂಲವಾಗಲು ಮೆಜೆಸ್ಟಿಕ್ನಿಂದ ಪೀಣ್ಯ ನಿಲ್ದಾಣಕ್ಕೆ ಸಂಪರ್ಕ ಸಾರಿಗೆಗಳ ವ್ಯವಸ್ಥೆ ಮಾಡಲಾಗಿತ್ತು.