ಪುತ್ತೂರು, ಫೆ.05: ಇಲ್ಲಿನ ಬೆಳಂದೂರು ಜಿ.ಪಂ. ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುಷ್ಪಾವತಿ ಗೌಡ ಕಳುವಾಜೆರವರು ಚುನಾಯಿತರಾಗಿದ್ದು 3520 ಅಂತರದಲ್ಲಿ ಜಯಭೇರಿ ಭಾರಿಸಿದ್ದಾರೆ. ಕೇಂದ್ರದ ಕಾನೂನು ಸಚಿವ ಡಿ.ವಿ.ಸದಾನಂದ ಗೌಡರವರ ಸಹೋದರಿ ಸಾವಿತ್ರಿ ಶಿವರಾಂರವರ ಅಕಾಲಿಕ ನಿಧನದಿಂದ ತೆರವಾದ ಬೆಳಂದೂರು ಜಿ.ಪಂ. ಕ್ಷೇತ್ರದ ಉಪಚುನಾವಣೆ ಫೆ. 1 ರಂದು ನಡೆದಿತ್ತು. ಕಾಂಗ್ರೆಸ್‌ನಿಂದ ಹಿರಿಯ ಸದಸ್ಯೆ ಭಾಗೀರಥಿ ಗೌಡ ಕುಂಬ್ಲಾಡಿಯವರ ಸ್ಪರ್ಧಿಸಿದ್ದರಲ್ಲದೇ. ಬಿಜೆಪಿ ಪಕ್ಷದಿಂದ ಪುಷ್ಪಾವತಿ ಗೌಡ ಕಳುವಾಜೆ ಅಭ್ಯರ್ಥಿಗಳಾಗಿ ಅಂತಿಮ ಕಣದಲ್ಲಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯ ನೇರ ಹಣಾಹಣಿ ಈ ಕ್ಷೇತ್ರದಲ್ಲಿ ಕಂಡು ಬಂದಿತ್ತು. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿಯವರಿಗೂ ಈ ಕ್ಷೇತ್ರ ಭಾರೀ ಸವಾಲಾಗಿ ಪರಿಣಮಿಸಿತ್ತು.
ಮತ ಎಣಿಕೆಯು ತಾಲೂಕು ಕಛೇರಿಯಲ್ಲಿ ನಡೆದಿದ್ದು, ಬಿಜೆಪಿ ಪಕ್ಷದ ಪುಷ್ಪಾವತಿ ಗೌಡ ಕಳುವಾಜೆಯವರು 10966 ಮತಗಳನ್ನು ಪಡೆದರೆ. ಕಾಂಗ್ರೆಸ್ ಪಕ್ಷದ ಭಾಗೀರಥಿ ಗೌಡ ಕುಂಬ್ಲಾಡಿರವರು 7446 ಮತಗಳನ್ನು ಪಡೆದರು ವಿಜಯದ ಹಾದಿಯತ್ತ ನಡೆಯಲು ಸಾಧ್ಯವಾಗಲಿಲ್ಲ. 3520 ರ ಭಾರೀ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಪುಪ್ಪಾವತಿ ಗೌಡ ಕಳುವಾಜೆರವರು ಜಯಶಾಲಿಯಾಗಿದ್ದಾರಲ್ಲದೆ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡ ಸಮಾಧಾನ ಬಿಜೆಪಿಗಿದ್ದರೆ. ಶಾಸಕಿ ಶಕುಂತಲಾ ಶೆಟ್ಟಿಯವರು ಇಲ್ಲಿ ಮುಖಭಂಗ ಅನುಭವಿಸಿದರು ಎಂದು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಪುತ್ತೂರಿನಲ್ಲಿ ಮನ ಮಾಡುತ್ತಿರುವ ಕಾವು ಹೇಮನಾಥ ಶೆಟ್ಟಿ ಪದಚ್ಯುತಿಯ ಅಸಮಾಧಾನವು ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಬೀಸಿದ್ದು ಇದರ ಬಿಸಿ ಬೆಳಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೂ ತಟ್ಟಿರುವುದರಲ್ಲಿ ಸಂಶಯವೇ ಇಲ್ಲ ಎನ್ನಲಾಗಿದೆ.
ಪುತ್ತೂರು ಕಾಂಗ್ರೆಸ್ ಈಗ ಒಡೆದ ಮನೆಯಾಗಿದ್ದು ಇದರ ಲಾಭ ಬಿಜೆಪಿ ಪಡೆಯುವುದರಲ್ಲಿ ಸಂಶಯವೇ ಇಲ್ಲವಾಗಿದೆ. ಬೆಳಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಮರಳಿ ಗೆಲ್ಲುವುದರೊಂದಿಗೆ ಬಿಜೆಪಿ ಭಾರೀ ಸಂಭ್ರಮ ಆಚರಿಸಿದ್ದು ಪಟಾಕಿಯನ್ನು ಸಿಡಿಸಿ ಸಿಹಿಯನ್ನು ಹಂಚಿ ಪರಸ್ಪರ ಸಂಭ್ರಮಿಸಿದರಲ್ಲದೇ ಸದಾನಂದ ಗೌಡ ಹಾಗೂ ನಳಿನ್‌ಕುಮಾರ್ ಕಟೀಲು, ನರೇಂದ್ರ ಮೋದಿಗೆ ಜಯಘೋಷವನ್ನು ಹಾಕಿದರು.
ವರದಿ: ನರೇಂದ್ರ ಕೆರೆಕಾಡು.