ಕರ್ನಾಟಕ

‘ಅರ್ಕಾವತಿ ಕರ್ಮಕಾಂಡ: ಸತ್ಯ–ಮಿಥ್ಯಗಳ ಇಣುಕು ನೋಟ’ ಎಂಬ ಪುಸ್ತಕ ಕುಮಾರಸ್ವಾಮಿಯಿಂದ ಬಿಡುಗಡೆ

Pinterest LinkedIn Tumblr

pvec07feb2015JDSBook

ಬೆಂಗಳೂರು: ಅರ್ಕಾವತಿ ಬಡಾವಣೆ  ಡಿನೋಟಿಫಿ­ಕೇಷನ್‌ ಕುರಿತ ದಾಖಲೆ­ಗಳನ್ನು ಒಳಗೊಂಡ ‘ಅರ್ಕಾವತಿ ಕರ್ಮ­ಕಾಂಡ: ಸತ್ಯ–ಮಿಥ್ಯಗಳ ಇಣುಕು ನೋಟ’ ಎಂಬ ಪುಸ್ತಕವನ್ನು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರ­ಸ್ವಾಮಿ ಶುಕ್ರವಾರ ವಿಧಾನ­ಸೌಧದಲ್ಲಿ ಬಿಡುಗಡೆ ಮಾಡಿದರು.

ಇದರ 67 ಪುಟಗಳಲ್ಲಿ ವಿಸ್ತೃತ ಮಾಹಿತಿ ಮತ್ತು 420 ಪುಟಗಳಲ್ಲಿ ವಿವಿಧ ದಾಖಲೆಗಳನ್ನು ನೀಡಲಾಗಿದೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ‘ರೀ ಡು’ ಹೆಸರಿನಲ್ಲಿ 544 ಎಕರೆ 31 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋ­ಟಿಫೈ ಮಾಡಿದ್ದಾರೆ. ಅವರ ನಿರ್ಧಾರ­ದಿಂದ ಮಧ್ಯವರ್ತಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಭಾರಿ ಲಾಭವಾಗಿದೆ. ಈ ಪೈಕಿ ಶೇ 90ರಷ್ಟು ಆಸ್ತಿ ಮಧ್ಯವರ್ತಿಗಳ ಪಾಲಾ­ಗಿದೆ’ ಎಂದು ಪುಸ್ತಕದಲ್ಲಿ ಆರೋಪಿಸ­ಲಾಗಿದೆ.

ಸಿದ್ದರಾಮಯ್ಯ ಅಕ್ರಮವಾಗಿ ಡಿನೋ­­ಟಿಫೈ ಮಾಡಿದ್ದು 702 ಎಕರೆ ಜಮೀನು  ಎಂದು ಕುಮಾರಸ್ವಾಮಿ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡು­ವಾಗ ಹೇಳಿದರು. ಆದರೆ, ಅವರು ಬಿಡು­ಗಡೆ ಮಾಡಿರುವ ಪುಸ್ತಕದಲ್ಲಿ ‘544 ಎಕರೆ 31 ಗುಂಟೆಯನ್ನು ಅಕ್ರಮ­­ವಾಗಿ ಕೈಬಿಟ್ಟಿದ್ದಾರೆ’ ಎಂದು ನಮೂದಿಸಲಾಗಿದೆ. ಕುಮಾರಸ್ವಾಮಿ  ಮುಖ್ಯಮಂತ್ರಿ­ಯಾ­ಗಿದ್ದ ಅವಧಿಯಲ್ಲಿ ಕೈಬಿಟ್ಟ 140 ಎಕರೆ ಎಕರೆ 32 ಗುಂಟೆ ಸೇರಿದಂತೆ 702 ಎಕರೆ 5 ಗುಂಟೆ­ಯನ್ನು ಪರಿಷ್ಕೃತ ಯೋಜನೆಯಲ್ಲಿ ಕೈಬಿಡ­ಲಾಗಿದೆ ಎಂಬ ಉಲ್ಲೇಖ ಇದೆ.

ಅಕ್ರಮ: ‘ನ್ಯಾಯಾಲಯಗಳ ಆದೇಶ­ದಂತೆ 198 ಎಕರೆ 20 ಗುಂಟೆಯನ್ನು ಡಿನೋಟಿಫೈ ಮಾಡಲಾಗಿತ್ತು. ಆ ನಂತರದಲ್ಲಿ 702 ಎಕರೆ 5 ಗುಂಟೆ ಜಮೀನನ್ನು ಪರಿಷ್ಕೃತ ಯೋಜನೆಯ ಹೆಸರಿನಲ್ಲಿ ಕೈಬಿಡಲಾಗಿದೆ. ಅದರಲ್ಲಿ 140 ಎಕರೆ 22 ಗುಂಟೆ ಜಮೀನುಗಳು ಮಾತ್ರ ಅಧಿಸೂಚನೆಯಿಂದ ಕೈಬಿಡಲು ಅರ್ಹವಾಗಿದ್ದವು. ಉಳಿದಂತೆ ಕೆಲ ಜಮೀನನ್ನು ನ್ಯಾಯಾಲಯಗಳ ಆದೇಶದಂತೆ ಕೈಬಿಡಲಾಯಿತು. 544 ಎಕರೆ 31 ಗುಂಟೆ ಜಮೀನುಗಳನ್ನು ನ್ಯಾಯಾಂಗ ನಿಂದನೆಯ ನೆರಳಿನಡಿ ಸಿದ್ದರಾಮಯ್ಯ ಅಕ್ರಮವಾಗಿ ಡಿನೋ­ಟಿಫೈ ಮಾಡಿದ್ದಾರೆ’ ಎಂದು ದೂರಿ­ದರು.

ಜಮೀನು ಸ್ವಾಧೀನ ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿ­ಸಿದ್ದರು. ಆಗ ವಿಭಾಗೀಯ ಪೀಠದ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಡಿಎ, ಕೆಲವು ಅಂಶಗಳನ್ನು ಆಧರಿಸಿ ಸ್ಥಳ ಪರಿಶೀಲನೆ ನಡೆಸಿ ನಿರ್ಣಯಕ್ಕೆ ಬರುವುದಾಗಿ ತಿಳಿಸಿತ್ತು. ಬಳಿಕ ಪ್ರಕರಣ ಸುಪ್ರೀಂಕೋರ್ಟ್‌ ತಲುಪಿತ್ತು. ಆಗ ಆರು ಅಂಶಗಳ ಆಧಾರದಲ್ಲಿ ಪರಿಶೀಲ­ನೆಗೆ ಆದೇಶಿಸಲಾಗಿತ್ತು ಎಂದರು.

ದುರ್ಬಳಕೆ: ‘ವಿಶೇಷ ಭೂಸ್ವಾಧೀನಾ­ಧಿಕಾರಿಗಳ ನೇಮ­ಕಾತಿಗೆ ಕೋರ್ಟ್ ಆದೇಶ ನೀಡಿರ­ಲಿಲ್ಲ. ಆದರೂ, ಅವ­ರನ್ನು ನೇಮಿಸಿ ಅರೆನ್ಯಾಯಿಕ ಅಧಿಕಾರ ನೀಡಲಾ­ಯಿತು. ಅವರ ವರದಿಗಳನ್ನು ಆಧರಿಸಿ ಜಮೀನು­ಗಳನ್ನು ಕೈಬಿಡಲಾ­ಯಿತು. ಎಲ್ಲದಕ್ಕೂ ನ್ಯಾಯಾಂಗ ನಿಂದನೆ­­ ನೆಪ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ನ್ಯಾಯಾಂಗ­ವನ್ನೇ ದುರ್ಬ­ಳಕೆ ಮಾಡಿಕೊಳ್ಳ­ಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಪರಿಷ್ಕೃತ ಯೋಜನೆಯ ಹೆಸರಿನಲ್ಲಿ ಅಂತಿಮ ಅಧಿಸೂಚನೆ­ಯಿಂದ 1,634 ಎಕರೆ 3 ಗುಂಟೆ ಜಮೀನುಗಳನ್ನು ಕೈಬಿಡ­ಲಾಗಿದೆ. ಅಂತಿಮ ಅಧಿಸೂಚನೆಯನ್ನು ವಾಪಸು ತೆಗೆದುಕೊ­ಳ್ಳದೆ ಪರಿಷ್ಕೃತ ಯೋಜನೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸ­ಲಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಇದರಿಂದ ಅರ್ಕಾವತಿ ಬಡಾವಣೆ ಯೋಜನೆ ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘2012ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ವಿಶೇಷ ಭೂಸ್ವಾಧೀನಾಧಿಕಾರಿಗಳ ವರದಿ ಆಧರಿಸಿ 285 ಎಕರೆ 18 ಗುಂಟೆ ಜಮೀನನ್ನು ಡಿನೋಟಿಫೈ ಮಾಡುವ ಸಂಬಂಧ ಅಡ್ವೊಕೇಟ್‌ ಜನರಲ್‌  ಅಭಿಪ್ರಾಯ ಕೋರಿದ್ದರು. ಬಿಡಿಎ ಆಡಳಿತ ಮಂಡಳಿ ನಿರ್ಣಯದ ಮೂಲಕ ಡಿನೋಟಿಫೈ ಮಾಡುವುದು ಮಾತ್ರ ಸಾಧ್ಯ ಎಂದು ಆಗಿನ ಅಡ್ವೊಕೇಟ್‌ ಜನರಲ್‌ ಎಸ್‌.ವಿಜಯಶಂಕರ್‌ ಅಭಿಪ್ರಾಯ ನೀಡಿದ್ದರು’.

‘ನಂತರ ಈ ಕಡತವನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಅವರು ಆಗಿನ ಮುಖ್ಯ­ಮಂತ್ರಿ ಜಗದೀಶ ಶೆಟ್ಟರ್‌ ಮುಂದೆ ಮಂಡಿಸಿದ್ದರು. ಆದರೆ ಶೆಟ್ಟರ್‌ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಕೆಲ ದಿನಗಳ ಬಳಿಕ ಕಡತವನ್ನು ಬಿಡಿಎಗೆ ಹಿಂದಿರುಗಿಸಿದ್ದ ಮೀನಾ, ಸಾರ್ವ­ಜನಿಕ ಹಿತ ಗಮನದಲ್ಲಿರಿಸಿಕೊಂಡು ಎಚ್ಚರಿಕೆಯಿಂದ ನಿರ್ಧರಿ­ಸು­ವಂತೆ ಸೂಚಿಸಿದ್ದರು’ ಎಂದು ಕುಮಾರ­ಸ್ವಾಮಿ ತಿಳಿಸಿದರು.

ಕಡತ ಬಿಡಿಎಗೆ ಹಿಂದಿರುಗಿದ ಬಳಿಕ ಬೇಕಾಬಿಟ್ಟಿಯಾಗಿ ಜಮೀನುಗಳನ್ನು ಸೇರಿಸಲಾಯಿತು. ನ್ಯಾಯಾಂಗ ನಿಂದನೆ­ಯಿಂದ ಪಾರಾಗುವ ನೆಪದಲ್ಲಿ ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡಲಾಯಿತು. ನ್ಯಾಯಾಲಯದ ಆದೇಶ ಮತ್ತು ಕಾನೂನುಗಳನ್ನು ತಮಗೆ ಬೇಕಾದಂತೆ ತಿರುಚಿ ಪರಿಷ್ಕೃತ ಯೋಜನೆ ಪ್ರಕಟಿಸಲಾಗಿದೆ ಎಂದು ಆರೋಪಿಸಿದರು.

‘ನ್ಯಾಯಾಂಗ ಆಯೋಗ, ತನಿಖೆಯಿಂದ ಏನಾದರೂ ಆಗು­ತ್ತದೆ ಎಂದು ಹೇಳುವಂತಿಲ್ಲ. ಸದನದಲ್ಲೇ ಚರ್ಚೆ ನಡೆಸಬೇಕು ಎಂಬುದು ನನ್ನ ಬೇಡಿಕೆ. ಪುಸ್ತಕದ ಪೂರ್ಣ ಪಾಠವನ್ನು ಜೆಡಿಎಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಯಾರಾ­ದರೂ ಅದನ್ನು ಬಳಸಿಕೊಂಡು ಹೋರಾಟ ನಡೆಸಲಿ’ ಎಂದರು.

119 ಎಕರೆ ಕರಾಮತ್ತು
ಪರಿಷ್ಕೃತ ಯೋಜನೆಯಲ್ಲಿ 119 ಎಕರೆ ಜಮೀನನ್ನು ಯಾವುದೇ ವರದಿಗಳ ಆಧಾರವಿಲ್ಲದೆ ಕೈಬಿಡಲಾಗಿದೆ. ‘ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಲಾಗಿದೆ’ ಎಂಬ ಕಾರಣ ನೀಡಲಾಗಿದೆ. ಇದರ ಹಿಂದಿನ ಕರಾಮತ್ತು ಹೊರಬರ­ಬೇಕಿದೆ ಎಂದು ಒತ್ತಾಯಿಸಿದರು.
* * *

ತಾವು ಒಂದು ಗುಂಟೆ ಜಮೀನನ್ನೂ ಅಕ್ರಮವಾಗಿ ಡಿನೋಟಿಫೈ ಮಾಡಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಈಗ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಶುದ್ಧಹಸ್ತರಾಗಿದ್ದರೆ ವಿಧಾನ­ಸಭೆಯಲ್ಲಿ ದಾಖಲೆ ಮಂಡಿಸಲಿ. ಅಕ್ರಮ ಎಸಗಿಲ್ಲ ಎಂಬುದನ್ನು ಸಾಬೀತು ಮಾಡಲಿ
– ಎಚ್‌.ಡಿ. ಕುಮಾರಸ್ವಾಮಿ
* * *

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ­ಸ್ವಾಮಿ ಪುಸ್ತಕ ಬಿಡುಗಡೆ ಮಾಡು­ವುದಕ್ಕಿಂತ ಸೂಕ್ತ ದಾಖ­ಲೆ­ಗಳಿದ್ದರೆ ಲೋಕಾ­ಯುಕ್ತಕ್ಕೆ ಅಥವಾ ನ್ಯಾ.­ಕೆಂಪಯ್ಯ ಆಯೋಗಕ್ಕೆ ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಲಿ.
– ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

Write A Comment