ಕುಂದಾಪುರ: ಸ್ಪರ್ಧಾತ್ಮಕವಾದ ಪ್ರಸ್ತುತ ಕಾಲಘಟ್ಟದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸಿ ಮುನ್ನೆಡೆಸುವುದು ಸವಾಲಿನ ಕಾರ್ಯವಾಗಿದೆ. ಗ್ರಾಹಕರ ಅಗತ್ಯತೆಗಳನ್ನು ಗಮನಿಸಿ ಗ್ರಾಹಕರ ಜೊತೆಗೆ ಮುನ್ನೆಡೆದಾಗ ಮಾತ್ರವೇ ಯಾವುದೇ ಸಂಸ್ಥೆ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಿದೆ ಎಂದು ಹೋಲಿ ರೋಸರಿ ಚರ್ಚ್‌ನ ಧರ್ಮಗುರುಗಳಾದ ಫಾ. ಅನೀಲ್ ಡಿಸೋಜಾ ಹೇಳಿದರು.
ಅವರು ಕುಂದಾಪುರದ ಸೈಂಟ್ ಮೇರಿಸ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ (ನಿ.) ಇದರ ಗ್ರಾಹಕರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶತಮಾನಗಳಿಗೂ ಹೆಚ್ಚು ಇತಿಹಾಸವಿರುವ ಈ ಬ್ಯಾಂಕ್ ಗ್ರಾಹಕರ ಅಗತ್ಯತೆಗಳನ್ನು ಅರಿತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಕಾರ್ಯಚರಿಸುತ್ತಿದೆ. ಅಲ್ಲದೇ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲಾ ಸಮುದಾಯ ಹಾಗೂ ಸಮಾಜದ ಜನರಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿಯೇ ಎಂ.ಸಿ.ಸಿ. ಬ್ಯಾಂಕಿನ ನಾಲ್ಕು ಶಾಖೆಗಳಲ್ಲಿ ಕುಂದಾಪುರ ಶಾಖೆಯು ಪ್ರಥಮ ಸ್ಥಾನದಲ್ಲಿದ್ದು, ಈ ನಿಟ್ಟಿನಲ್ಲಿ ಗ್ರಾಹಕರಿಗೆ ಕುಂದಾಪುರದ ಎಂ.ಸಿ.ಸಿ. ಬ್ಯಾಂಕ್ ನೀಡುವ ಅಮೂಲ್ಯ ಸೇವೆ ಶ್ಲಾಘನೀವಾಗಿದೆ ಎಂದರು.
ಕುಂದಾಪುರ ನ್ಯಾಯವಾದಿ ಟಿ.ಬಿ. ಶೆಟ್ಟಿ ಮಾತನಾಡಿ, ಹಲವು ಬ್ಯಾಂಕುಗಳ ಹಾಗೂ ರಾಷ್ಟ್ರೀಕ್ರತ ಬ್ಯಾಂಕುಗಳ ಸ್ಪರ್ಧೆಯ ನಡುವೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಂಸ್ಥೆಯಲ್ಲಿ ದುಡಿಯುವ ಪ್ರಬಂಧಕರ ಸಹಿತವಾಗಿ ಉದ್ಯೋಗಿಗಳ ಕಾರ್ಯ ಮಹತ್ತರವಾದುದುದಾಗಿದ್ದು, ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಆದಾಗ ಮಾತ್ರವೇ ಬ್ಯಾಂಕ್ ಮೇಲ್ಸ್ತರಕ್ಕೆ ಹೋಗಲಿದೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಫ್ರಾನ್ಸಿಸ್ ಕುಟಿನ್ಹಾ, ಉಪಾಧ್ಯಕ್ಷ ಅಲ್ವಿನ್ ಫತ್ರಾವೋ, ನಿರ್ದೇಶಕರಾದ ಅರ್ಚಿವಾಲ್ಡ್ ಮಿನೆಜಸ್, ಜೆರಾಲ್ಡ್ ಜುಡ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.
ಜೆರಾಲ್ಡ್ ಜುಡ್ ಡಿಸಿಲ್ವಾ ಸ್ವಾಗತಿಸಿದರು, ಎಂ.ಸಿ.ಸಿ. ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂದಕರಾದ ಸಂದೀಪ್ ವಂದಿಸಿದರು, ಜ್ಯೋತಿ ಬೆರೆಟ್ಟೋ ಕಾರ್ಯಕ್ರಮ ನಿರೂಪಿಸಿದರು.