ಬೆಂಗಳೂರು: ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ₨1,800 ಕೋಟಿ ಬಾಕಿ ಹಣ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.
ನಗರ ರೈಲು ನಿಲ್ದಾಣದಿಂದ ಬೆಳಿಗ್ಗೆ 11 ಗಂಟೆಗೆ ಜಾಥಾ ಪ್ರಾರಂಭಿಸಿದ ಪ್ರತಿಭಟನಾಕಾರರು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೊರಟರು. ಸ್ವಾತಂತ್ರ್ಯ ಉದ್ಯಾನದ ಬಳಿ ಬ್ಯಾರಿಕೇಡ್ಗಳನ್ನು ಹಾಕಿಕೊಂಡಿದ್ದ ಪೊಲೀಸರು ಅವರನ್ನು ಅಲ್ಲಿಯೇ ತಡೆದಿದ್ದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ರಸ್ತೆ ಮಧ್ಯೆಯೇ ಧರಣಿ ಕುಳಿತರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘54 ಕಾರ್ಖಾನೆಗಳು ಕಳೆದ ವರ್ಷ ₨1,800 ಕೋಟಿ ಬಾಕಿ ಉಳಿಸಿಕೊಂಡಿವೆ. ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಕಳೆದ ನವೆಂಬರ್ನಲ್ಲಿ ಆದೇಶ ಹೊರಡಿಸಿತ್ತು. ಆ ನಂತರ ನೆಪ ಮಾತ್ರಕ್ಕೆ ನೋಟಿಸ್ ಜಾರಿಗೊಳಿಸಿದ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದು ರೈತರನ್ನು ವಂಚಿಸಿದೆ’ ಎಂದರು.
ಸಂಜೆ ಸ್ಥಳಕ್ಕೆ ಬಂದ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಸಕ್ಕರೆ ಸಚಿವ ಮಹದೇವ ಪ್ರಸಾದ್, ‘ಬಾಕಿ ಹಣ ಕೊಡಿಸುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು. ಇದಕ್ಕೆ ಪ್ರತಿಭಟನಾಕಾರರು, ‘ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲೇ ಭರವಸೆ ಕೊಟ್ಟಿದ್ದರು. ಆದರೆ, ಈಗ ಅವರು ಮಾತು ತಪ್ಪಿದ್ದಾರೆ. ಲಿಖಿತ ಭರವಸೆ ಬೇಕು’ ಎಂದು ಪಟ್ಟು ಹಿಡಿದರು.
ಮತ್ತೊಮ್ಮೆ ವಾಗ್ವಾದ: ಕಬ್ಬು ಬೆಳೆಗಾರರು ಅಹೋರಾತ್ರಿ ಮುಷ್ಕರ ನಡೆಸಲು ನಿರ್ಧರಿಸಿದ್ದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ರಾತ್ರಿ ಮತ್ತೆ ವಾಗ್ವಾದ ನಡೆಯಿತು. ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್, ಪ್ರತಿಭಟನಾ ಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.