ಬೆಂಗಳೂರು: ಪೊಲೀಸ್ ನಿರ್ಬಂಧದ ನಡುವೆಯೂ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ವಿಎಚ್‌ಪಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಭಾಷಣದ ವಿಡಿಯೊ ಪ್ರಸಾರ ಮಾಡಿದ ಸಂಬಂಧ ಕಾರ್ಯಕ್ರಮದ ಆಯೋಜಕರು ಹಾಗೂ ತೊಗಾಡಿಯಾ ವಿರುದ್ಧ ನಗರದ ಶಂಕರಪುರ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ.
‘ತೊಗಾಡಿಯಾ, ವಿಶ್ವ ಹಿಂದೂ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ವಲಯ ಸಂಚಾಲಕ ಗೋಪಾಲ್‌ಜಿ ಹಾಗೂ ನಗರ ಘಟಕದ ಅಧ್ಯಕ್ಷ ಸೂರ್ಯನಾರಾಯಣ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ತಿಳಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಮತ್ತು ಹೈಕೋರ್ಟ್ ಆದೇಶ ಉಲ್ಲಂಘಿಸಿ ಸಮಾಜೋತ್ಸವದಲ್ಲಿ ತೊಗಾಡಿಯಾ ಅವರ ಭಾಷಣದ ವಿಡಿಯೊ ಪ್ರಸಾರ ಮಾಡಿದ, ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಕಾರ್ಯಕ್ರಮ ನಡೆಸಿದ, ಕಾನೂನುಬಾಹಿರವಾಗಿ ಗುಂಪುಗೂಡಿದ ಹಾಗೂ ಭಾಷಣ ಪ್ರಸಾರ ತಡೆಯಲು ಮುಂದಾದ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರವರೆಗೆ ಮಾತ್ರ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಆಯೋಜಕರು ಆದೇಶ ಉಲ್ಲಂಘಿಸಿ ಮಧ್ಯಾಹ್ನ 3.30ರಿಂದ ರಾತ್ರಿ ಸುಮಾರು 8 ಗಂಟೆವರೆಗೆ ಕಾರ್ಯಕ್ರಮ ನಡೆಸಿದ್ದಾರೆ ಎಂದು ಅಲೋಕ್‌ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸದ್ಯದಲ್ಲೇ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತೊಗಾಡಿಯಾ ಅವರು ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಬಹುದೆಂಬ ಕಾರಣಕ್ಕೆ ಪೊಲೀಸರು, ಅವರಿಗೆ ಫೆ.5ರಿಂದ 11ರವರೆಗೆ ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದರು.
ಹೀಗಾಗಿ ಆಯೋಜಕರು ಕಾರ್ಯಕ್ರಮದ ಸ್ಥಳದಲ್ಲಿ ಬೃಹತ್ ಪರದೆ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ತೊಗಾಡಿಯಾ ಅವರ ಭಾಷಣ ಪ್ರಸಾರಕ್ಕೆ ಮುಂದಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಡಿಯೊ ಕಾನ್ಫರೆನ್ಸ್ ಸೇರಿದಂತೆ ಬೇರೆ ಯಾವುದೇ ರೀತಿಯಲ್ಲೂ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ನಿಷೇಧ ಹೇರಿದ್ದರು. ಆದರೂ ಕಾರ್ಯಕ್ರಮದ ಅಂತಿಮಘಟ್ಟದಲ್ಲಿ ಆಯೋಜಕರು ಪೊಲೀಸರ ಸಮ್ಮುಖದಲ್ಲೇ ದಿಢೀರಾಗಿ ತೊಗಾಡಿಯಾ ಅವರ ಮುದ್ರಿತ ಭಾಷಣವನ್ನು ಪ್ರಸಾರ ಮಾಡಿದ್ದರು.