ಮೆಲ್ಬೋರ್ನ್, ಫೆ.26: ಗ್ರೂಪ್ ಎ ವಿಭಾಗದ ಮಹತ್ವದ ಪಂದ್ಯದಲ್ಲಿಂದು ಬಾಂಗ್ಲಾ ವಿರುದ್ಧ ಲಂಕನ್ನರು 92 ರನ್ ಗಳ ಜಯ ಸಾಧಿಸಿದ್ದಾರೆ. ಸತತ ವೈಫಲ್ಯದಿಂದ ಬಳಲುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ದಿಲ್ಷನ್ ಬಾಂಗ್ಲಾ ದೇಶದ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಆರ್ಭಟಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ನಿಗದಿತ 50 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 332 ರನ್‌ಗಳನ್ನು ಕಲೆ ಹಾಕುವ ಮೂಲಕ ಬಾಂಗ್ಲಾಗೆ ದೊಡ್ಡ ಸವಾಲನ್ನೇ ಮುಂದಿಟ್ಟಿತು.
ಬೃಹತ್ ಸವಾಲನ್ನು ಬೆನ್ನಟ್ಟಿದ ಬಾಂಗ್ಲಾ 47 ನೆ ಒವರ್ ನಲ್ಲಿ ಅನ್ನೆಲ್ಲೇ ವಿಕೆಟ್ ಗಳಲ್ಲೂ ಕಳೆದುಕೊಂಡು ಸೋಲಿಗೆ ಶರಣಾಯಿತು. ಲಂಕಾ ಪರವಾಗಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕಣಕ್ಕಿಳಿದ ತಿರುಮಾನೆ ಮತ್ತು ದಿಲ್ಷನ್ ಜೋಡಿ ಆಕರ್ಷಕ ಆಟ ಗಮನ ಸೆಳೆಯಿತು. 122 ರನ್‌ಗಳ ಜತೆಯಾಟ ಲಂಕಾಗೆ ದೊಡ್ಡ ಅಡಿಪಾಯ ಹಾಕಿಕೊಡಲಾಯಿತು.
ಅರ್ಧ ಶತಕ ಸಿಡಿಸಿ ತಿರುಮಾನೆ ಔಟಾದ ನಂತರ ಬಂದ ಸಂಗಕ್ಕರ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುತ್ತಾ ಹೋದರು. ದಿಲ್ಷನ್ ಜತೆಗೂಡಿ 2ನೆ ವಿಕೆಟ್ ಮುರಿಯದ 211 ರನ್‌ಗಳ ಜತೆಯಾಟ ಭರ್ಜರಿಯಾಗಿತ್ತು.
45ನೆ ಓವರ್ ನಂತರ ಆರ್ಭಟಿಸಿದ ಸಂಗಕ್ಕರ ಮತ್ತು ದಿಲ್ಷನ್ ಯಾವ ಹಂತದಲ್ಲೂ ಒತ್ತಡಕ್ಕೆ ಒಳಗಾಗದೆ ತಂಡವನ್ನು ಸುಭದ್ರವಾಗಿ ಮುನ್ನಡೆಸಿ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿ ರನ್ ಹೊಳೆ ಹರಿಸಿ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಸಂಗಕ್ಕರ 105 ರನ್ ಗಳಿಸಿ ಅಜೇಯರಾಗಿ ಉಳಿದರೆ ದಿಲ್ಷನ್ 161 ರನ್ ಬಾರಿಸಿದರು.