ನವದೆಹಲಿ: ಕಪ್ಪು ಹಣದ ಹಾವಳಿ ತಡೆಯುವ ನಿಟ್ಟಿನಲ್ಲಿ ಹೊಸ ಕ್ರಮ ಪ್ರಕಟಿಸಿರುವ ಕೇಂದ್ರ ಸರ್ಕಾರ, ವಿದೇಶಗಳಲ್ಲಿ ಹೊಂದಿರುವ ಆಸ್ತಿಯ ಮಾಹಿತಿ ಮುಚ್ಚಿಟ್ಟವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳಲ್ಲಿ ನಗದು ಬಳಕೆಗೆ ಪ್ರೋತ್ಸಾಹ ನೀಡದಿರಲು ಸರ್ಕಾರ ನಿರ್ಧರಿಸಿದೆ.
ಕಪ್ಪು ಹಣ ಶೇಖರಣೆ ತಡೆಯಲು ಹೊಸ ಕಾನೂನು ಜಾರಿಗೊಳಿಸುವುದಲ್ಲದೆ, ಹಣ ಪಾವತಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವುದನ್ನು ಪ್ರೋತ್ಸಾಹಿಸಲಾಗುವುದು. ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವಾಗ ಪ್ಯಾನ್ (Permanent Account Number) ಸಂಖ್ಯೆ ನಮೂದಿಸುವುದನ್ನು ಕಡ್ಡಾಯ-ಗೊಳಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಬಜೆಟ್ ಮಂಡನೆ ವೇಳೆ ಪ್ರಕಟಿಸಿದರು.
ದೇಶದ ಅರ್ಥ ವ್ಯವಸ್ಥೆ ಮತ್ತು ಸಮಾಜಕ್ಕೆ ಪಿಡುಗಾಗಿರುವ ಕಪ್ಪು ಹಣದ ಹಾವಳಿ ತಡೆಯಲು ಹೊಸ ಕಾನೂನು ರೂಪಿಸುವುದು ಈ ಬಾರಿಯ ಬಜೆಟ್ನ ಪ್ರಮುಖ ಪ್ರಸ್ತಾವ. ಹೊಸ ಮಸೂದೆಯನ್ನು ಈ ಬಾರಿಯ ಅಧಿವೇಶನದಲ್ಲೇ ಮಂಡಿಸಲಾಗುವುದು.
ಆದಾಯ ಮತ್ತು ಆಸ್ತಿಯ ಮಾಹಿತಿ ನೀಡದೆ ಇರುವುದು, ವಿದೇಶದಲ್ಲಿ ಹೊಂದಿರುವ ಆಸ್ತಿಗೆ ತೆರಿಗೆ ಪಾವತಿಸದಿರುವುದು ಹೊಸ ಮಸೂದೆ ಅನ್ವಯ ಅಪರಾಧವಾಗುತ್ತದೆ. ಇಂಥ ಕೃತ್ಯ ಎಸಗಿದವರಿಗೆ ಗರಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ. ದಂಡ ಪಾವತಿಸಿ ಶಿಕ್ಷೆಯಿಂದ ಪಾರಾಗುವ ಅವಕಾಶವೂ ಇರುವುದಿಲ್ಲ.
ದೇಶದೊಳಗಿನ ಕಪ್ಪು ಹಣ ನಿಯಂತ್ರಣಕ್ಕೆ ‘ಬೇನಾಮಿ ವ್ಯವಹಾರ (ನಿಷೇಧ) ಮಸೂದೆ’ಯನ್ನು ಇದೇ ಅಧಿವೇಶನದಲ್ಲಿ ಮಂಡಿಸಲಾಗುವುದು. ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಬೇನಾಮಿ ಆಸ್ತಿ ಹೊಂದಿರುವವರಿಗೆ ಶಿಕ್ಷೆ ವಿಧಿಸಲು ಈ ಮಸೂದೆ ಅವಕಾಶ ನೀಡುತ್ತದೆ. ಈ ಮೂಲಕ, ಕಪ್ಪು ಹಣದ ಸೃಷ್ಟಿ ಮತ್ತು ಸಂಗ್ರಹಕ್ಕೆ ಇರುವ ಬಹುದೊಡ್ಡ ಮಾರ್ಗ ಮುಚ್ಚಿಹೋಗುತ್ತದೆ ಎಂದು ಜೇಟ್ಲಿ ವಿವರಿಸಿದರು.
ಸ್ಥಿರಾಸ್ತಿ ಖರೀದಿ/ಮಾರಾಟ ಸಂದರ್ಭದಲ್ಲಿ ರೂ. 20 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಮುಂಗಡ ಕೊಡುವುದು ಮತ್ತು ಪಡೆಯುವುದನ್ನು ನಿಷೇಧಿಸಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಇದೆ ಎಂದೂ ಅವರು ಹೇಳಿದರು.
ಹೊಸ ಮಸೂದೆ ಅನ್ವಯ, ಆದಾಯ ಮತ್ತು ಆಸ್ತಿಗಳನ್ನು ಮುಚ್ಚಿಡುವವರಿಗೆ ಆ ಆದಾಯ ಮತ್ತು ಆಸ್ತಿಯ ಶೇಕಡ 300ರಷ್ಟು ಹೆಚ್ಚಿನ ದಂಡ ವಿಧಿಸಲೂ ಅವಕಾಶ ಇದೆ.
ಆದಾಯ ತೆರಿಗೆ ಇಲಾಖೆಗೆ ಆದಾಯದ ಕುರಿತು ಸಂಪೂರ್ಣ ಮಾಹಿತಿ ನೀಡದಿರುವವರಿಗೆ, ವಿದೇಶದಲ್ಲಿರುವ ಆಸ್ತಿ ಕುರಿತು ಅಪೂರ್ಣ ಮಾಹಿತಿ ನೀಡುವವರಿಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಕೂಡ ಹೊಸ ಮಸೂದೆಯಲ್ಲಿ ಇದೆ.
ಆದಾಯದ ಮಾಹಿತಿಯನ್ನು ನೀಡುವಾಗ, ವಿದೇಶಿ ಬ್ಯಾಂಕ್ಗಳಲ್ಲಿ ಖಾತೆ ತೆರೆದ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಲಿದೆ.
ಬಡ್ಡಿ ತರುವ ಚಿನ್ನದ ಬಾಂಡ್
ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಭಾರತ. ಪ್ರತಿ ವರ್ಷ 800ರಿಂದ 1000 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಪ್ರಮಾಣ ತಗ್ಗಿಸಲು ಹಾಗೂ ಈಗಾಗಲೇ ದೇಶದಲ್ಲಿರುವ ಸುಮಾರು 20 ಸಾವಿರ ಟನ್ ಚಿನ್ನವನ್ನು ನಗದಾಗಿ ಪರಿವರ್ತಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಹಾಲಿ ಜಾರಿಯಲ್ಲಿರುವ ಚಿನ್ನದ ಠೇವಣಿ ಮತ್ತು ಚಿನ್ನ ಸಾಲ ಯೋಜನೆಗೆ ಬದಲಾಗಿ ಮೂರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.
1. ಚಿನ್ನ ನಗದೀಕರಣ: ಗ್ರಾಹಕರು ತಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್ನಲ್ಲಿಟ್ಟು, ವಿಶೇಷ ಖಾತೆಯನ್ನು ತೆರೆಯಬಹುದು. ಇದಕ್ಕೆ ಬಡ್ಡಿ ನೀಡಲಾಗುತ್ತದೆ. ವರ್ತಕರು ತಮ್ಮ ಚಿನ್ನದ ಖಾತೆಯ ಮೇಲೆ ಸಾಲ ಪಡೆಯಬಹುದು.
2.ಸವರನ್ ಗೋಲ್ಡ್ ಬಾಂಡ್: ಚಿನ್ನವನ್ನು ಲೋಹ ರೂಪದ ಬದಲು ಬಾಂಡ್ ರೂಪದಲ್ಲಿ ಖರೀದಿಸಲು ಅವಕಾಶ ಕಲ್ಪಿಸ-ಲಾಗಿದೆ. ಈ ಬಾಂಡ್ಗಳಿಗೆ ನಿಶ್ಚಿತ ಬಡ್ಡಿ ನೀಡಲಾಗುವುದು. ಅಲ್ಲದೇ ಈ ಬಾಂಡ್ಗಳನ್ನು ವಾಪಸ್ ನೀಡಿದರೆ ಚಾಲ್ತಿಯಲ್ಲಿರುವ ಚಿನ್ನದ ದರ ಪಾವತಿಸಲಾಗುತ್ತದೆ.
3.ಇಂಡಿಯನ್ ಗೋಲ್ಡ್ ಕಾಯಿನ್: ಅಶೋಕ ಚಕ್ರವುಳ್ಳ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಲಾಗುವುದು. ವಿದೇಶಗಳಿಂದ ಬರುವ ಚಿನ್ನದ ನಾಣ್ಯದ ಬೇಡಿಕೆಯನ್ನು ತಗ್ಗಿಸುವುದು ಇದರ ಉದ್ದೇಶ. ದೇಶದಲ್ಲಿ ಲಭ್ಯ ಇರುವ ಚಿನ್ನದ ಮರು ಬಳಕೆಗೂ ಇದು ನೆರವಾಗಲಿದೆ.
ಗೃಹ ಖಾತೆಗೆ ರೂ. 62 ಸಾವಿರ ಕೋಟಿ
ನವದೆಹಲಿ (ಪಿಟಿಐ): ಬಜೆಟ್ನಲ್ಲಿ ಗೃಹ ಖಾತೆಗೆ ರೂ. 62 ಸಾವಿರ ಕೋಟಿ ನೀಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಹಂಚಿಕೆಯಲ್ಲಿ ಶೇ 10.2ರಷ್ಟು ಏರಿಕೆಯಾಗಿದೆ. 2014–15ನೇ ಸಾಲಿನಲ್ಲಿ ಗೃಹ ಇಲಾಖೆಗೆ ರೂ. 56, 372 ಕೋಟಿ ನೀಡಲಾಗಿತ್ತು.
ಜಗತ್ತಿನ ಅತಿ ದೊಡ್ಡ ಅರೆ ಸೇನಾ ಪಡೆಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್) ರೂ. 14,089 ಕೋಟಿ ಮೀಸಲಿಡಲಾಗಿದೆ. ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ರೂ. 12,518 ಕೋಟಿ, ಭಾರತ ಟಿಬೆಟ್ ಗಡಿ ಪೊಲೀಸ್ಗೆ (ಐಟಿಬಿಪಿ) ರೂ. 3,736 ಕೋಟಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ರೂ. 5,197 ಕೋಟಿ ನೀಡಲಾಗಿದೆ.
ಎಸ್ಐಟಿಗೆ ಹೆಚ್ಚು ಅನುದಾನ
ಕಪ್ಪು ಹಣದ ಪಿಡುಗು ತಡೆಗೆ ರಚಿಸಲಾಗಿರುವ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಈ ಬಾರಿಯ ಬಜೆಟ್ನಲ್ಲಿ ಕಳೆದ ಬಾರಿಗಿಂತ ಶೇಕಡ 10ರಷ್ಟು ಹೆಚ್ಚಿನ ಅನುದಾನ ನಿಗದಿ ಮಾಡಲಾಗಿದೆ.
ಎಸ್ಐಟಿಗೆ ಈ ಬಾರಿ ರೂ. 45.39 ಕೋಟಿ ಮೀಸಲಿಡಲಾಗಿದೆ. ಕಳೆದ ಬಜೆಟ್ನಲ್ಲಿ ಇದಕ್ಕೆ ರೂ. 41.34 ಕೋಟಿ ನಿಗದಿ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದಲ್ಲಿಎಸ್ಐಟಿ ಕೆಲಸ ಮಾಡುತ್ತಿದೆ.
ಸ್ವಿಟ್ಜರ್ಲೆಂಡ್ ಸಹಕಾರ
ಕಳೆದ ಒಂಬತ್ತು ತಿಂಗಳುಗಳಲ್ಲಿ ಕೇಂದ್ರ ಸರ್ಕಾರವು ಕಪ್ಪು ಹಣವನ್ನು ವಾಪಸ್ ತರುವ ವಿಚಾರದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ನಿಯೋಗ 2014ರ ಅಕ್ಟೋಬರ್ನಲ್ಲಿ ಸ್ವಿಟ್ಜರ್ಲೆಂಡ್ಗೆ ಭೇಟಿ ನೀಡಿದ್ದು ಮಹತ್ವದ ಬೆಳವಣಿಗೆ ಎಂದು ಜೇಟ್ಲಿ ಹೇಳಿದ್ದಾರೆ.ಭೇಟಿ ಸಂದರ್ಭದಲ್ಲಿ ಅಲ್ಲಿನ ಸಂಸ್ಥೆಗಳು ಈ ಮುಂದಿನ ಅಂಶಗಳಿಗೆ ಒಪ್ಪಿಗೆ ಸೂಚಿಸಿವೆ.
*ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುವ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವುದು.
*ಬ್ಯಾಂಕ್ ಖಾತೆಗಳ ಅಸಲಿತನವನ್ನು ಸ್ಪಷ್ಟಪಡಿಸುವುದು.
*ನಿಗದಿತ ಕಾಲಮಿತಿಯಲ್ಲಿ ಮಾಹಿತಿ ಒದಗಿಸುವುದು.
*ಎರಡೂ ರಾಷ್ಟ್ರಗಳ ನಡುವೆ ಸ್ವಯಂಚಾಲಿತವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದರ ಕುರಿತು ಶೀಘ್ರವೇ ಮಾತುಕತೆ ಏರ್ಪಡಿಸುವುದು.
ಎಫ್ಪಿಐ=ಎಫ್ಡಿಐ
ಭಾರತೀಯ ಕಂಪೆನಿಗಳು ಇನ್ನಷ್ಟು ವಿದೇಶಿ ಬಂಡವಾಳವನ್ನು ಆಕರ್ಷಿಸುವ ಉದ್ದೇಶದಿಂದ ವಿದೇಶಿ ಬಂಡವಾಳ ಹೂಡಿಕೆ (ಎಫ್ಪಿಐ) ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ನಡುವಣ ವ್ಯತ್ಯಾಸವನ್ನು ತೆಗೆದು ಹಾಕುವ ಪ್ರಸ್ತಾವವನ್ನು ಜೇಟ್ಲಿ ಮಾಡಿದ್ದಾರೆ.
ಯೋಜನಾ ಅಭಿವೃದ್ಧಿ ಕಂಪೆನಿ
ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಕಾಂಬೋಡಿಯಾ, ಮ್ಯಾನ್ಮಾರ್, ಲಾವೊಸ್ ಮತ್ತು ವಿಯೆಟ್ನಾಂಗಳಲ್ಲಿ ಭಾರತೀಯ ಕಂಪೆನಿಗಳು ಬಂಡವಾಳ ಹೂಡುವುದಕ್ಕೆ ಉತ್ತೇಜನ ನೀಡುವ ಸಲುವಾಗಿ ‘ಯೋಜನಾ ಅಭಿವೃದ್ಧಿ ಕಂಪೆನಿ’ ಸ್ಥಾಪಿಸುವ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
***
ರೂ 69,500ಕೋಟಿ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಇತರ ಕೆಲವು ಸಂಸ್ಥೆಗಳ ಷೇರು ವಿಕ್ರಯ ಮಾಡಲಾಗುವುದು. ಇದರಿಂದ ಒಟ್ಟು ರೂ. 69,500 ಕೋಟಿ ವರಮಾನ ನಿರೀಕ್ಷಿಸಲಾಗಿದೆ.
ರಕ್ಷಣಾ ಕ್ಷೇತ್ರಕ್ಕೆ ರೂ. 2.46 ಲಕ್ಷ ಕೋಟಿ
ನವದೆಹಲಿ (ಪಿಟಿಐ): ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮುಂದಿನ ಆರ್ಥಿಕ ವರ್ಷದಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ. 2.46 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಹಂಚಿಕೆ ಪ್ರಮಾಣದಲ್ಲಿ ಶೇ 10.95ರಷ್ಟು ಏರಿಕೆಯಾಗಿದೆ. 2014–15 ಸಾಲಿನಲ್ಲಿ ರಕ್ಷಣಾ ಉದ್ದೇಶಕ್ಕೆ ರೂ. 2.22 ಲಕ್ಷ ಕೋಟಿ ನೀಡಲಾಗಿತ್ತು.
ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುವುದಕ್ಕಾಗಿ ‘ಭಾರತಲ್ಲೇ ತಯಾರಿಸಿ’ ಯೋಜನೆಗೆ ರಕ್ಷಣಾ ಕ್ಷೇತ್ರದಲ್ಲಿ ಒತ್ತು ನೀಡಲಾಗಿದೆ.
‘ಇದುವರೆಗೂ ನಾವು ಆಮದಿನ ಮೇಲೆ ಮಿತಿ ಮೀರಿ ಅವಲಂಬಿಸಿದ್ದೇವೆ. ಅದರಿಂದಾಗಿ ಸಮಸ್ಯೆಗಳನ್ನೂ ಎದುರಿಸಿದ್ದೇವೆ’ ಎಂದು ಜೇಟ್ಲಿ ಹೇಳಿದರು.
‘ಭಾರತೀಯರ ನಿಯಂತ್ರಣದಲ್ಲಿರುವ ಕಂಪೆನಿಗಳು ರಕ್ಷಣಾ ಸಾಮಗ್ರಿಗಳ ತಯಾರಿಕಾ ಸಂಸ್ಥೆಗಳಾಗಿ ಬದಲಾದರೆ, ದೇಶಕ್ಕೆ ಅಗತ್ಯವಾದ ರಕ್ಷಣಾ ಉಪಕರಣಗಳು ಇಲ್ಲೇ ಸಿಗುತ್ತವೆ. ಜೊತೆಗೆ ರಫ್ತು ಕೂಡ ಮಾಡಬಹುದು’ ಎಂದು ಹೇಳಿದರು.
ರಕ್ಷಣಾ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಅವರು, ‘ಭಾರತದಲ್ಲೇ ತಯಾರಿಸಿ ಯೋಜನೆ ಮೂಲಕ ಯುದ್ಧ ವಿಮಾನಗಳು ಸೇರಿದಂತೆ ಇತರ ಯುದ್ಧ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಪಡೆಯಲು ಪ್ರಯತ್ನಗಳು ನಡೆದಿವೆ. ಯುದ್ಧ ಸಾಮಗ್ರಿಗಳ ಖರೀದಿ ನಿರ್ಧಾರಗಳಲ್ಲಿ ಸರ್ಕಾರ ಕ್ಷಿಪ್ರವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಉದ್ಯೋಗ ಸೃಷ್ಟಿಸುವ ಗುರಿ
‘ಭಾರತದಲ್ಲೇ ತಯಾರಿಸಿ’ ಯೋಜನೆಯು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಉತ್ಪಾದನಾ ವಲಯದ ಪಾಲನ್ನು ಹೆಚ್ಚಿಸುವ ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ
– ಅರುಣ್ ಜೇಟ್ಲಿ