ಮಂಗಳೂರು ಮಾರ್ಚ್.02 : ಜನ ಸಾಮಾನ್ಯರಿಗೆ ಸುಲಭವಾಗಿ ಕಾನೂನಿನ ನೆರವು ಲಭ್ಯವಾಗುವ ಉದ್ದೇಶದಿಂದ ಸಂಚಾರಿ ಜನತಾ ನ್ಯಾಯಾಲಯದ ಮೂಲಕ ಜನರ ಬಳಿಗೆ ತೆರಳಲಾಗುತ್ತಿದೆ ಎಂದು ದ.ಕ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ. ಹೇಳಿದ್ದಾರೆ. ಅವರು ದ.ಕ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದಿನಿಂದ 3 ದಿನಗಳ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡುತ್ತಿದ್ದರು.
ಜನಸಾಮಾನ್ಯರಿಗೆ ಕಾನೂನು ಮಾಹಿತಿಗಾಗಿ ಸಾಕ್ಷರತಾ ರಥ ಸಂಚರಿಸುತ್ತಿದ್ದು, ಇದೀಗ ಮಂಗಳೂರು ನಗರವನ್ನು ಪ್ರವೇಶಿಸಿದೆ. ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ಮೂರು ದಿನಗಳ ಕಾಲ ಈ ಸಂಚಾರಿ ನ್ಯಾಯಾಲಯ ಸಂಚರಿಸಲಿದೆ. ಲೋಕ ಅದಾಲತ್, ಜನತಾ ನ್ಯಾಯಾಲಯದ ಮೂಲಕ ಈಗಾಗಲೇ ಹಲವಾರು ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯ ನಡೆಯುತ್ತಿದ್ದು, ಸಂಚಾರಿ ಜನತಾ ನ್ಯಾಯಾಲಯಕ್ಕೆ ಜಿಲ್ಲಾಡಳಿ ತದ ಹಲವು ಇಲಾಖೆಗಳು ಕೈಜೋಡಿ ಸಿವೆ ಎಂದವರು ಹೇಳಿದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಭಾಗವಹಿಸಿದ್ದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚಂಗಪ್ಪ ಮಾತನಾಡಿ, 2,500ಕ್ಕೂ ಅಧಿಕ ಕಾನೂನುಗಳು ಬಳಕೆಯಲ್ಲಿದ್ದು, ಯಾರೂ ಕೂಡಾ ಕಾನೂನು ವ್ಯಾಪ್ತಿಯಿಂದ ಹೊರಗುಳಿದು ಬದುಕು ಸಾಗಿಸುವಂತಿಲ್ಲ. ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿರುವ ದ.ಕ. ಸಂಪೂರ್ಣ ಕಾನೂನು ಸಾಕ್ಷರತಾ ಜಿಲ್ಲೆಯಾಗಿಯೂ ಹೊರ ಹೊಮ್ಮಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಮನಪಾ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕಿ ಗರ್ಟ್ರೂಡ್ ವೇಗಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಝ್ಜಲ್ ಅಹ್ಮದ್ ಖಾನ್ ಮೊದಲಾವದರು ಈ ಸಂದರ್ಭ ಉಪಸ್ಥಿತರಿದ್ದರು.