ವಿಟ್ಲ, ಮಾ.06 : ಕರೋಪಾಡಿ ಗ್ರಾಮದ ಅಪ್ತಾಪ್ತ ವಯಸ್ಕ ವಿದ್ಯಾರ್ಥಿನಿಯೋರ್ವಳು ನಿನ್ನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಅಪಹರಣ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರಲ್ಲಿ ದೂರು ದಾಖಲಾಗಿದೆ.
ಕರೋಪಾಡಿ ಗ್ರಾಮದ ಅರಸಳಿಕೆ ಇಸ್ಮಾಯಿಲ್ ಎನ್ನುವವರ ಪುತ್ರಿ ಖಲಂದರ್ ಬಿ.ಬಿ. ಸುಮಯ್ಯ (17) ನಾಪತ್ತೆಯಾಗಿರುವ ಬಾಲಕಿ.
ಕನ್ಯಾನದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಖಲಂದರ್ ಬೀಬಿ ಸುಮೈಯಾ ನಿನ್ನೆ ಬೆಳಿಗ್ಗೆ 9.30ಕ್ಕೆ ಕಾಲೇಜಿಗೆ ಹೋಗಿ ಪರೀಕ್ಷಾ ಪ್ರವೇಶಪತ್ರವನ್ನು ತರುವುದಾಗಿ ತಿಳಿಸಿ ಮನೆಯಿಂದ ಹೊರಬಿದ್ದಿದ್ದಳು. ಆದರೆ ಆ ಬಳಿಕ ಮನೆಗೆ ವಾಪಸಾಗದೇ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಆಕೆ ಸಂಬಂಧಿಕರು ಅಥವಾ ಪರಿಚಿತರ ಮನೆಗಳಿಗೂ ಹೋಗಿಲ್ಲವೆನ್ನಲಾಗಿದೆ.
ಆಕೆ ಯಾವುದೋ ಕಾರಣದಿಂದ ಸ್ವಇಚ್ಛೆಯಿಂದ ಮನೆಬಿಟ್ಟು ಹೋಗಿರಬಹುದು ಅಥವಾ ಆಕೆಯನ್ನು ಯಾರಾದರೂ ಅಪಹರಿಸಿರಬಹುದು ಎಂದು ತಂದೆ ಇಸ್ಮಾಯಿಲ್ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.